ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಭಿನ್ನಮತ ಚಟುವಟಿಕೆಗಳು ಮತ್ತೆ ಪ್ರಾರಂಭಗೊಂಡಿದೆ.
ಈ ನಿಟ್ಟಿನಲ್ಲಿ ನಗರದಲ್ಲಿ ಬುಧವಾರ ರೇಣುಕಾಚಾರ್ಯ ಸೇರಿದಂತೆ ಸಮಾನ ಮನಸ್ಕ ಬಿಜೆಪಿ ಶಾಸಕರು ಒಂದೆಡೆ ಸೇರಿ ಸಮಾಲೋಚನೆ ನಡೆಸುವ ಸಾಧ್ಯತೆಗಳಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ ಹಲವು ವಿವಾದಗಳು ಹುಟ್ಟಿಕೊಂಡಿವೆ.
ಈ ಬಗ್ಗೆ ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಬಿಜೆಪಿ ಬಗ್ಗೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ನೋಟಿಸ್ ಹಿಂದೆ ರಾಜಕೀಯ ಕುತಂತ್ರವಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವ ಶಾಸಕ ರೇಣುಕಾಚಾರ್ಯ ಅವರಂತಹ ನಿಷ್ಠಾವಂತರಿಗೆ ಭಿನ್ನಮತೀಯ ಎಂದು ನೋಟಿಸ್ ನೀಡಿದ್ದು ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ರೇಣುಕಾಚಾರ್ಯ ಅವರಿಗೆ ಇನ್ನೂ ಷೋಕಾಸ್ ನೋಟಿಸ್ ತಲುಪಿಲ್ಲ. ಮಂಗಳವಾರವೇ ಪೋಸ್ಟ್ ಮಾಡಲಾಗಿದ್ದು ಬುಧವಾರತಲುಪುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.