ರಾಜ್ಯದ ಶಾಲೆಗಳಲ್ಲಿ ಬೈಬಲ್ ವಿತರಣೆಗೆ ರಾಜ್ಯ ಸರ್ಕಾರ ಒಡ್ಡಿರುವ ತಡೆಯನ್ನು ನಿವಾರಿಸಿ, ಬೈಬಲ್ ವಿತರಣೆಗೆ ಅವಕಾಶ ಮಾಡಿಕೊಡಬೇಕೆಂದು ಕ್ರಿಶ್ಚಿಯನ್ ಸಂಘಟನೆಯೊಂದು ರಾಜ್ಯ ಹೈಕೋರ್ಟ್‌ಗೆ ಮೊರೆ ಹೋಗಿದೆ.
ರಾಜ್ಯದ ಶಾಲೆಗಳಲ್ಲಿ ಕೇವಲ ಒಂದು ಧರ್ಮದ ಪುಸ್ತಕಗಳನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಉಳಿದ ಧರ್ಮಗಳನ್ನು ಕಡೆಗಣಿಸುವ ಕೆಲಸಕ್ಕೆ ಮುಂದಾಗಿರುವುದಾಗಿ ಕ್ರಿಶ್ಚಿಯನ್ ಲೀಗಲ್ ಅಸೋಸಿಯೇಶನ್ ದೂರಿನಲ್ಲಿ ತಿಳಿಸಿದೆ. ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಲ್ಲಿ ಬೈಬಲ್ ವಿತರಣೆ ಮಾಡದಂತೆ ಸರ್ಕಾರ ತಡೆಯೊಡ್ಡಿರುವುದಾಗಿಯೂ ಅದು ಹೇಳಿದೆ.
ಆ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಿಂದೂ ಧರ್ಮದ ಪುಸ್ತಕಗಳನ್ನು ಮಾತ್ರ ಖರೀದಿಸಬೇಕು ಎಂದು ರಾಜ್ಯ ಸರ್ಕಾರ 2006 ಜೂನ್ 29ರಂದು ಅಧಿಕೃತವಾಗಿ ನಿರ್ದೇಶನ ನೀಡಿದೆ ಎಂದು ಕ್ರಿಶ್ಚಿಯನ್ ಸಂಘಟನೆ ದೂರಿನಲ್ಲಿ ವಿವರಿಸಿದೆ.
ಶಾಲೆಗಳಲ್ಲಿ ಬೈಬಲ್ ಅನ್ನು ಉಚಿತವಾಗಿ ನೀಡಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು ಎಂದು ತಿಳಿಸಿರುವ ಅಸೋಸಿಯೇಷನ್, ಈ ಬಗ್ಗೆ ರಾಜ್ಯ ಸರ್ಕಾರ ಆರಂಭಿಕವಾಗಿ ಒಪ್ಪಿಗೆ ಸೂಚಿಸಿತ್ತು. ತದನಂತರ ಈ ಸರ್ಕಾರ ತನ್ನ ನಿಲುವನ್ನು ಬದಲಾವಣೆ ಮಾಡಿಕೊಂಡು ಬೈಬಲ್ ವಿತರಣೆಗೆ ಅಡ್ಡಗಾಲು ಹಾಕಿದೆ ಎಂದು ದೂರಿನಲ್ಲಿ ಆಪಾದಿಸಿದೆ.
ಆ ಹಿನ್ನೆಲೆಯಲ್ಲಿ ರಾಜ್ಯದ ಶಾಲೆಗಳಲ್ಲಿ ಉಚಿತವಾಗಿ ಬೈಬಲ್ ಅನ್ನು ವಿತರಿಸಲು ಅನುವು ಮಾಡಿಕೂಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅಸೋಸಿಯೇಶನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.