ತಮ್ಮ ರಾಜಧಾನಿ ಚೆನ್ನೈಯಲ್ಲಿ ಸ್ಥಾಪನೆಯಾಗುತ್ತಿರುವ ಕನ್ನಡ ಕವಿ ಸರ್ವಜ್ಞನ ಮೂರ್ತಿ 9.1 ಮೀಟರ್ ಎತ್ತರದ್ದು ಎಂಬುದನ್ನು ಕಂಡುಕೊಂಡಿರುವ ಬೆಂಗಳೂರು ತಮಿಳು ಭಾಷಿಗರು, 18 ವರ್ಷಗಳಿಂದ ಅನಾವರಣಗೊಳ್ಳಲು ಅಲಸೂರು ಕೆರೆ ಬಳಿ ಕಾಯುತ್ತಿದ್ದ ತಮಿಳು ದಾರ್ಶನಿಕ ತಿರುವಳ್ಳುವರ್ ಪ್ರತಿಮೆಯನ್ನು ರಾತೋರಾತ್ರಿ ಬದಲಾಯಿಸಿಬಿಟ್ಟಿದ್ದಾರೆ!
1991ರ ಸೆಪ್ಟೆಂಬರ್ 1ರಂದು ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರಿಂದ ಉದ್ಘಾಟನೆಯಾಗಿದೆ ಎಂಬ ಶಿಲಾಫಲಕವಿರುವ, ತಮಿಳು ದಾರ್ಶನಿಕ, ಕವಿ ತಿರುವಳ್ಳುವರ್ ಅವರ ಕುಳಿತ ಭಂಗಿಯ ಹಳೆಯ ಮೂರ್ತಿ ಅಲ್ಲಿತ್ತು. ಅದನ್ನೀಗ ಬದಲಾಯಿಸಿ, ಸ್ವಲ್ಪ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ವೆಬ್‌ದುನಿಯಾಕ್ಕೆ ದೊರೆತ ಮಾಹಿತಿ ಪ್ರಕಾರ, ಬೆಂಗಳೂರು ತಮಿಳು ಸಂಘದ ಪದಾಧಿಕಾರಿಗಳು ಇತ್ತೀಚೆಗೆ ತುರ್ತು ಸಭೆ ಸೇರಿ, ಚೆನ್ನೈಯಲ್ಲಿ ಅಷ್ಟೆತ್ತರದ ಸರ್ವಜ್ಞ ಪ್ರತಿಮೆ ಸ್ಥಾಪನೆಯಾಗುತ್ತದೆಯಾದರೆ, ಇಲ್ಲಿನ ತಿರುವಳ್ಳುವರ್ ಪ್ರತಿಮೆಯೂ ಅದಕ್ಕೆ ಸಮದಂಡಿಯಾಗಿರುವ ಅಗತ್ಯವಿದೆ ಎಂದು ಮನಗಂಡಿದ್ದಾರೆ. ತಕ್ಷಣವೇ, ಸ್ವಲ್ಪ ದೊಡ್ಡ, ಕುಳಿತ ಭಂಗಿಯ ವಿಗ್ರಹ ತಯಾರಿಕೆಗೂ ಆರಂಭಿಸಿಬಿಟ್ಟರು, ಅದೀಗ ಪೂರ್ಣಗೊಂಡಿದ್ದು, ಪೀಠವೇರಲು ಸಜ್ಜಾಗಿದೆ.
ಕನ್ನಡದ ಸರ್ವಜ್ಞನಿಗೆ ಚೆನ್ನೈಯ ಅಯನಾವರಂನ ಜೀವಾ ಉದ್ಯಾನವೆಂಬ ಪುಟ್ಟ ತಾಣದಲ್ಲಿ ಅವಕಾಶ ಕೊಡಲಾಗಿದ್ದರೆ ಮತ್ತು ಅಲ್ಲಿಯ ಕನ್ನಡಿಗರು ನಮ್ಮ ಕಾರ್ಯಕ್ರಮ ಯಾವಾಗ, ಏನು, ಎಲ್ಲಿ ಎಂಬಿತ್ಯಾದಿಯಾಗಿ ಯೋಚಿಸುವ ಸ್ಥಿತಿಯಲ್ಲಿದ್ದರೆ, ತಮಿಳು ಭಾಷಿಗರು ತಮ್ಮವರೇ ಆದ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಬಗೆಗೆ, ಕಾಳಜಿ ವಹಿಸಿ, ತಕ್ಷಣ ಬದಲಾಯಿಸಿದ್ದಾರೆ ಮತ್ತು ಅದ್ಧೂರಿಯ ಉತ್ಸವ ಏರ್ಪಡಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸರ್ವಜ್ಞನಿಗೂ ಕನ್ನಡಿಗರಿಂದ, ಸರಕಾರದಿಂದ ಇಷ್ಟೇ ಪ್ರಾಧಾನ್ಯತೆ ಲಭಿಸುವಂತಾಗಿದ್ದಿದ್ದರೆ...!