ಕೆಎಸ್ಆರ್ಟಿಸಿ ಚಾಲಕ ಭರತ್ ಶೆಟ್ಟಿ (32) ತನ್ನನ್ನು ಮದುವೆಯಾಗಿ ಗರ್ಭಿಣಿಯಾಗಿರುವ ತನಗೆ ಕೈ ಕೊಟ್ಟು ಹೋಗಿದ್ದಾರೆ. ಪತಿ ತನಗೆ ಮರಳಿ ದೊರೆಯದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕಿರುತೆರೆ ನಟಿ ಶ್ರೀಲತಾ ಶೆಟ್ಟಿ (25) ಎಚ್ಚರಿಸಿದ್ದಾರೆ.
ಮಾನಸವೀಣೆ, ನೆಲಮುಗಿಲು ಧಾರವಾಹಿಗಳಲ್ಲಿ ನಟಿಸಿರುವ ಶ್ರೀಲತಾ, ಹೊಂಗನಸು ಚಿತ್ರದ ಸಣ್ಣ ಪಾತ್ರದಲ್ಲೂ ಕಾಣಿಸಿಕೊಂಡಿದ್ದರು. ಧಾರಾವಾಹಿ ಚಿತ್ರೀಕರಣಕ್ಕಾಗಿ ಮಂಗಳೂರು-ಬೆಂಗಳೂರು ನಡುವೆ ತಿರುಗಾಟ ಮಾಡಬೇಕಿತ್ತು. ಆ ಸಂದರ್ಭದಲ್ಲಿ ಭಟ್ಕಳ ಸಮೀಪದ ಹಾಡುವಳ್ಳಿಯ ಕೆಎಸ್ಆರ್‌ಟಿಸಿ ಚಾಲಕ ಭರತ್ ಶೆಟ್ಟಿ ಪರಿಚವಾಗಿ, ನಮ್ಮಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.
ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ನಂತರ ಭರತ್ ಮತ್ತು ನಾನು ಮಾರ್ಚ್ 20ರಂದು ಕುಂದಾಪುರದ ಕುಂದೇಶ್ವರ ದೇವಸ್ಥಾನದಲ್ಲಿ ಮದುವೆಯಾದೆವು. ಆರಂಭದ ಮೂರು ತಿಂಗಳು ಭರತ್ ಶಿರೂರಿನಲ್ಲಿರುವ ಬಾಡಿಗೆ ಮನೆಗೆ ಬರುತ್ತಿದ್ದು, ನಂತರ ಬರುವುದನ್ನು ನಿಲ್ಲಿಸಿಬಿಟ್ಟಿದ್ದ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಅಲವತ್ತುಕೊಂಡಿದ್ದಾರೆ.
ಈ ಬಗ್ಗೆ ಭರತ್ ಕುಟುಂಬದವರನ್ನು ಭೇಟಿಯಾಗಿ ವಿಷಯ ತಿಳಿಸಿದೆ. ಅವರು 5ಲಕ್ಷ ರೂಪಾಯಿ ವರದಕ್ಷಿಣೆ ಹಾಗೂ ಜೈನ ಧರ್ಮಕ್ಕೆ ಮತಾಂತರವಾಗಲು ಒತ್ತಾಯ ಮಾಡಿದರು. ಅದಕ್ಕೆ ನಾನು ಒಪ್ಪಲಿಲ್ಲ, ಹಾಗಾಗಿ ಅವರು ನನ್ನ ಗಂಡ ಭರತ್‌ರಿಂದ ನನ್ನನ್ನು ದೂರ ಮಾಡಿದ್ದಾರೆ ಎಂದು ದೂರಿದರು.
ಆತನನ್ನು ಮರಳಿ ಪಡೆಯಲು ಪೊಲೀಸರಿಗೆ ದೂರು ನೀಡಿದ್ದರೂ ಫಲಕಾರಿಯಾಗಿಲ್ಲ. ಹಾಗಾಗಿ ತನಗೆ ಉಪವಾಸ ಸತ್ಯಾಗ್ರಹವೊಂದೇ ಉಳಿದಿರುವ ದಾರಿ ಎಂದು ಶ್ರೀಲತಾ ಶೆಟ್ಟಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದರು. ಮಹಿಳಾ ಸಂಘಟನೆಯ ಸಹಾಯದಿಂದ ಬೆಂಗಳೂರು ಹಲಸೂರು ಗೇಟ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಜೂ.15ರಂದು ದೂರು ದಾಖಲಿಸಿದ್ದೇನೆ. ಗೃಹಸಚಿವ ವಿ.ಎಸ್.ಆಚಾರ್ಯ ಹಾಗೂ ಪೊಲೀಸ್ ಕಮೀಷನರ್ ಶಂಕರ ಬಿದರಿ ಅವರನ್ನು ಜು.13ರಂದು ಭೇಟಿಯಾಗಿದ್ದೇನೆ.
ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಭಟ್ಕಳ ಡಿವೈಎಸ್ಪಿ ಅವರಿಗೆ ಲಿಖಿತ ಸೂಚನೆಯನ್ನು ಅವರು ನೀಡಿದ್ದಾರೆ. ಆದರೂ ಏನೂ ಪ್ರಯೋಜನವಾಗಿಲ್ಲ.ಇದೀಗ ತನಗೆ ನ್ಯಾಯ ಒದಗಿಸಿ ಕೊಡಿ ಎಂದು ಮಾಧ್ಯಮಗಳ ಮುಂದೆ ಬಂದಿರುವುದಾಗಿ ಶ್ರೀಲತಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಫೂರ್ತಿಧಾಮದ ಕೇಶವ ಕೋಟೇಶ್ವರ, ಮಾನಸ ಯುವತಿ ಮಂಡಳಿ ಬಿ.ಸವಿತಾ ಹಾಜರಿದ್ದರು.