ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾರಾದರು ತೀರಿಕೊಂಡರೆ ರಜೆ ಘೋಷಿಸುವ ಬದಲು ರಕ್ಷಾಬಂಧನದಂತಹ ದಿನವನ್ನು ಹಬ್ಬವನ್ನಾಗಿ ಆಚರಿಸಲು ರಜೆ ನೀಡಬೇಕು ಎಂದು ವಕ್ಫ್ ಸಚಿವ ಡಾ.ಮುಮ್ತಾಜ್ ಅಲಿ ಖಾನ್ ಸಲಹೆ ನೀಡಿದ್ದಾರೆ.
ರಕ್ಷಾ ಬಂಧನ ಆಚರಣೆ ಮತ್ತು ಈ ಆಚರಣೆಯನ್ನು ಸಾರ್ವಜನಿಕ ಹಬ್ಬವಾಗಿಸುವ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯ ನ್ಯಾ.ಎಂ.ರಾಮಾ ಜೋಯಿಸ್ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರೊ.ಮುಮ್ತಾಜ್ ಮಾತನಾಡಿದರು.
ರಾಮಾ ಜೋಯಿಸ್ ಮಾತನಾಡಿ, ರಕ್ಷಾ ಬಂಧನ ಆಚರಣೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಸಾರ್ವಜನಿಕ ಚಳುವಳಿಯಾಗಿ ಬೆಳೆಸಬೇಕು. ದೇಶಭಕ್ತಿ ಅಭಿವ್ಯಕ್ತಿಗೆ ಯಾವುದೇ ಧರ್ಮ ಅಡ್ಡಿಯಾಗಬಾರದು. ಈ ಆಚರಣೆ ಖಂಡಿತ ಯಾವ ಧರ್ಮಕ್ಕೂ ಸಂಬಂಧಿಸಿದ ವಿಚಾರವಲ್ಲ. ಆಸ್ಕರ್ ಫೆರ್ನಾಂಡಿಸ್ ಅವರನ್ನೂ ಒಳಗೊಂಡಂತೆ ದೇಶದ ಬಹಳಷ್ಟು ಮಂದಿ ಇದನ್ನು ಸಾರ್ವಜನಿಕ ಆಚರಣೆಯಾಗಿಸಲು ಒಪ್ಪಿಗೆ ನೀಡಿದ್ದಾರೆ ಎಂದರು.
ನ್ಯಾ.ಎಂ.ಎನ್.ವೆಂಕಟಾಚಲಯ್ಯ, ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್, ಭಾರತೀಯ ವಿದ್ಯಾಭವನ ನಿರ್ದೇಶಕ ಡಾ.ಮತ್ತೂರು ಕೃಷ್ಣಮೂರ್ತಿ, ಸ್ವಾಮಿ ಹರ್ಷಾನಂದಜೀ, ಕುವೆಂಪು ವಿವಿ ಕುಲಪತಿ ಆರ್.ಗಜೇಂದ್ರಗಡ ಕಾರ್ಯಕ್ರಮದಲ್ಲಿ ಹಾಜರಿದ್ದರು.