ಮೂರು ಸಾವಿರ ಮಠದ ಪೀಠಾಧೀಶ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಬುಧವಾರ ಇದ್ದಕ್ಕಿದ್ದಂತೆ ಮಠ ತೊರೆಯಲು ಮುಂದಾದ ಘಟನೆ ಭಕ್ತರಲ್ಲಿ ಹತ್ತು-ಹಲವು ಶಂಕೆಗಳನ್ನು ಹುಟ್ಟು ಹಾಕಿದೆ.
ಹಿರಿಯ ಭಕ್ತರ ಮನವೊಲಿಕೆಯಿಂದ ಶ್ರೀಗಳು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರೂ ಭಕ್ತರ ತಳಮಳ ಇನ್ನೂ ಕಡಿಮೆಯಾಗಿಲ್ಲ. ಸುದೀರ್ಘ 15ವರ್ಷ ಕೋರ್ಟಿನಲ್ಲಿ ವ್ಯಾಜ್ಯ ನಡೆಸಿ ಉತ್ತರಾಧಿಕಾರಿ ಆಗಿರುವ ಶ್ರೀಗಳು ಇದ್ದಕ್ಕಿದ್ದಂತೆ ಪೀಠತ್ಯಾಗಕ್ಕೆ ಮುಂದಾಗಿದ್ದೇಕೆ? ಯಾವ ಒತ್ತಡ, ಯಾವ ನೋವು ಅವರನ್ನು ಈ ನಿಲುವಿಗೆ ಬರುವಂತೆ ಮಾಡಿತು? ಎನ್ನುವುದು ಭಕ್ತರನ್ನು ಕಾಡುತ್ತಿದೆ.
ಕರ್ನಾಟಕದ ಪ್ರಮುಖ ವೀರಶೈವ ಮಠಗಳಲ್ಲಿ ಒಂದು. ಇದಕ್ಕೆ ಅಪಾರ ಭಕ್ತ ಸಮೂಹವಿದೆ. ಲಿಂಗೈಕ್ಯ ಜಗದ್ಗುರು ಡಾ.ಗಂಗಾಧರ ರಾಜಯೋಗಿಂದ್ರರು(ಮೂಜಗಂ) ಇವರನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸಿದ ಬಳಿಕ ಎಲ್ಲವೂ ಸುಲಲಿತವಾಗಿ ನಡೆದಿದ್ದರೆ ಇಂದು ಗುರುಸಿದ್ದರಾಜರು ಉತ್ತರಾಧಿಕಾರದ ದಶಮಾನೋತ್ಸವ ಆಚರಿಸಿಕೊಳ್ಳಬೇಕಿತ್ತು.
ಮೂರು ಸಾವಿರ ಮಠದ ಶ್ರೀಗಳ ಒಳ್ಳೆಯತನವನ್ನೇ ಕೆಲ ಆಪ್ತ ವಲಯದ ಭಕ್ತರು ದುರುಪಯೋಗಪಡಿಸಿಕೊಂಡಿದ್ದಾರೆ. ಅದರಿಂದ ಮನನೊಂದು ಶ್ರೀಗಳು ಉತ್ತರಾಧಿಕಾರಿಯನ್ನು ನೇಮಿಸುವ ನಿರ್ಧಾರಕ್ಕೆ ಬಂದಿರಬಹುದು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂರು ಸಾವಿರ ಮಠದ ಉತ್ತರರಾಧಿಕಾರಿ ವಿಷಯದಲ್ಲಿ ತಲೆದೋರಿದ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ನಡೆಯಲಿರುವ ಸಭೆಯಲ್ಲಿ ವಿಧಾನಸಭೆ ಸ್ಪೀಕರ್ ಜಗದೀಶ್ ಶೆಟ್ಟರ್ ಹಾಜರಾಗಲಿದ್ದಾರೆಂದು ತಿಳಿಸಿದ್ದಾರೆ.