ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಚೆನ್ನೈಯಲ್ಲಿ ಪೀಠವೇರಿ ನಿಂತ ಸರ್ವಜ್ಞ ಮೂರ್ತಿ (Sarvajna in Statue Chennai Aynavaram | Karnataka | Tamilnadu | Thiruvalluvar)
ಉಭಯ ರಾಜ್ಯಗಳ ಮಧ್ಯೆ ಸಾಮರಸ್ಯ ಮತ್ತು ಸೌಹಾರ್ದತೆ ಹೆಚ್ಚಿಸುವ ನಿಟ್ಟಿನಲ್ಲಿ ಕನ್ನಡದ ಮಹಾನ್ ಕವಿ ಸರ್ವಜ್ಞನನ್ನು ಚೆನ್ನೈಯ ಅಯನಾವರಂ ಜೀವಾ ಉದ್ಯಾನವನದಲ್ಲಿ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಬಿರುಸಿನ ಸಿದ್ಧತೆಗಳು ನಡೆದಿದ್ದು, ಈಗಾಗಲೇ ಬೆಂಗಳೂರಿನಿಂದ ಬಂದಿರುವ ಸರ್ವಜ್ಞ ಮೂರ್ತಿಯನ್ನು ಪೀಠದ ಮೇಲೆ ಸ್ಥಾಪಿಸಲಾಗಿದೆ. ಅದಕ್ಕೆ ಕನ್ನಡ ಧ್ವಜವನ್ನು ಹೊದಿಯಲಾಗಿದೆ. (ಎಡಭಾಗದಲ್ಲಿರುವುದು ಬುಧವಾರ ಆ ಸ್ಥಳಕ್ಕೆ ಭೇಟಿ ನೀಡಿದಾಗ ಕಂಡು ಬಂದ ದೃಶ್ಯ.)
ಕರ್ನಾಟಕ ಮತ್ತು ತಮಿಳುನಾಡಿನ ಲೋಕೋಪಯೋಗಿ ಇಲಾಖೆಯ ಇಂಜಿನಿಯರುಗಳು ಸ್ಥಳದಲ್ಲಿದ್ದು, ಉದ್ಯಾನವನವನ್ನು ಸುಂದರಗೊಳಿಸುವ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ.
38x38x39 ಮೀಟರ್ ಸುತ್ತಳತೆಯ ತ್ರಿಕೋನಾಕೃತಿಯ ಉದ್ಯಾನದ ಮಧ್ಯಭಾಗದಲ್ಲಿ ಸುಮಾರು ಹನ್ನೆರಡಿ ಅಡಿ ಎತ್ತರದ ಪೀಠದ ಮೇಲೆ 9 ಅಡಿ ಎತ್ತರದ ಕಂಚಿನ ಸರ್ವಜ್ಞ ಮೂರ್ತಿಯನ್ನು ಎತ್ತರದ ಪೀಠದಲ್ಲಿ ನಿಲ್ಲಿಸಲಾಗಿದೆ. ಸುತ್ತಲೂ ಕಲ್ಲಿನ ಹಾಸು ಹಾಸಲಾಗುತ್ತಿದೆ. ಪೀಠದ ಸುತ್ತಲಿನ ನಾಲ್ಕು ಬದಿಗಳಲ್ಲಿ ಸರ್ವಜ್ಞನ 2 ತ್ರಿಪದಿಗಳು ಮತ್ತು ಸರ್ವಜ್ಞನ ಕುರಿತ ಕಿರುಪರಿಚಯ ಕನ್ನಡದಲ್ಲಿ ಮತ್ತು ತಮಿಳಿನಲ್ಲಿ ಕೆತ್ತಿಸಲಾಗುತ್ತಿದೆ. ಮದರಾಸು ವಿವಿ ಕನ್ನಡ ವಿಭಾಗದ ಉಸ್ತುವಾರಿ ಡಾ.ತಮಿಳ್ ಸೆಲ್ವಿ ಅವರು ಸರ್ವಜ್ಞನ ತ್ರಿಪದಿಗಳು ಮತ್ತು ಕಿರು ಪರಿಚಯವನ್ನು ತಮಿಳಿಗೆ ಅನುವಾದಿಸಿದ್ದಾರೆ.
ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ? ಜಾತಿ ವಿಜಾತಿಯೆನಬೇಡ | ಜೀವನೊಲಿ-ದಾತನೇ ದಾತ ಸರ್ವಜ್ಞ ಹಾಗೂ ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು | ಸುಡುವಗ್ನಿಯೊಂದೇ ಇರುತಿರಲು ನಡುವೆ | ಕುಲಗೋತ್ರ ಎತ್ತಣದು | ಸರ್ವಜ್ಞ ಎಂಬ ತ್ರಿಪದಿಗಳು ಪೀಠದ ಸುತ್ತ ಅಲಂಕರಿಸಲಿವೆ.
ಹತ್ತಾರು ಮರಗಳಿರುವ ಪುಟ್ಟ ಉದ್ಯಾನದ ಸುತ್ತ ಏಳು ಅಡಿಗಳ ಬೇಲಿ ನಿರ್ಮಿಸಲಾಗುತ್ತದೆ. ನಂತರ, ಗ್ರಾನೈಟ್ ಶಿಲೆಯ ವಾಕಿಂಗ್ ಪಾತ್ ಕೂಡ ನಿರ್ಮಾಣವಾಗುತ್ತಿದೆ. ಹೂ ಕುಂಡಗಳನ್ನು, ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳನ್ನು ಇರಿಸಲಾಗುತ್ತಿದೆ. ದೀಪಾಲಂಕಾರಕ್ಕೆ, ಹುಲ್ಲಿನ ಹಾಸುವಿಗೆ ಸಿದ್ಧತೆಗಳು ನಡೆಯುತ್ತಿವೆ.
WD
ಸುತ್ತಲೂ ರಸ್ತೆಯೇ ಇರುವುದರಿಂದ, ಅನಾವರಣ ಕಾರ್ಯಕ್ರಮಕ್ಕೆ ವೇದಿಕೆ ಎಲ್ಲಿ ನಿರ್ಮಿಸುವುದು ಎಂಬ ಬಗ್ಗೆ ಉಸ್ತುವಾರಿ ವಹಿಸಿರುವವರು ಯೋಜನೆ ರೂಪಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವಷ್ಟು ದೊಡ್ಡ ಸಮಾರಂಭ ಏರ್ಪಡಿಸಿದರೆ ಭದ್ರತಾ ವ್ಯವಸ್ಥೆಗಳಿಗೆ ತೊಂದರೆಯಾಗಬಹುದು ಎಂಬುದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರ ಅಳಲು. ಇದಕ್ಕಾಗಿ ಇಲ್ಲಿ ಅಧಿಕೃತ ಉದ್ಘಾಟನೆ ಏರ್ಪಡಿಸಿ, ಬಳಿಕ ಬೇರೆಲ್ಲಾದರೂ ಸಭೆ ಏರ್ಪಡಿಸಬಹುದಾಗಿತ್ತು ಎಂಬುದು ಅವರ ಸಲಹೆ.
ಕನ್ನಡಿಗ ಅಭಿಮಾನಿಗಳು ಬೆಂಗಳೂರಿನಿಂದ ರೈಲಿನಲ್ಲೇ ಆಗಮಿಸಲಿದ್ದಾರೆ ಎಂಬ ಮಾಹಿತಿ ಬಂದಿದೆ. ಸ್ಥಳೀಯ ಕನ್ನಡಿಗರಿಗೆ ಸಕಾಲಕ್ಕೆ ಆಮಂತ್ರಣ ತಲುಪಿದರೆ ಸಾಕಷ್ಟು ಮಂದಿ ಭಾಗವಹಿಸಬಹುದು.
ತಮಿಳುನಾಡಿನ ಮಾಹಿತಿ ಇಲಾಖೆಯು ಆಮಂತ್ರಣಪತ್ರಗಳನ್ನು ಕನ್ನಡಿಗರಿಗೆ ಹಂಚಲೆಂದು ಕರ್ನಾಟಕ ಸಂಘಕ್ಕೆ ಮಂಗಳವಾರ ಒಪ್ಪಿಸಿದ್ದಾರೆ. ಕನ್ನಡ ಮತ್ತು ತಮಿಳಿನಲ್ಲಿ ಆಮಂತ್ರಣ ಪತ್ರವಿದೆ. ಆ 13ರ ಗುರುವಾರ ಸಂಜೆ 4 ಗಂಟೆಗೆ ಅನಾವರಣ ಕಾರ್ಯಕ್ರಮ ನಡೆಯಲಿದೆ. ಆಮಂತ್ರಣ ಪತ್ರದಲ್ಲಿರುವ ಕಾರ್ಯಕ್ರಮದ ಪ್ರಕಾರ, ತಮಿಳು ನಾಡ ಗೀತೆಯ ಬಳಿಕ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ. ಕರ್ನಾಟಕ ಗೃಹ ಸಚಿವ ವಿ.ಎಸ್.ಆಚಾರ್ಯರು ಆಶಯ ಭಾಷಣ ಮಾಡಲಿದ್ದಾರೆ. 'ಸ್ನೇಹ ಸಂಘ' ಅಧ್ಯಕ್ಷ ಅಟ್ಟಾವರ್ ರಾಮದಾಸ್ ಕೂಡ ಭಾಷಣ ಮಾಡಲಿದ್ದಾರೆ. ಮಾಹಿತಿ ಇಲಾಖೆ ಸಚಿವ ಪರಿಧಿ ಇಳಂವಳುದಿ ಸ್ವಾಗತಿಸಲಿದ್ದು, ತಮಿಳು ಅಭಿವೃದ್ಧಿ, ಧಾರ್ಮಿಕ ಮತ್ತು ಮಾಹಿತಿ ಇಲಾಖೆ ಕಾರ್ಯದರ್ಶಿ ಕ.ಮುತ್ತುಸ್ವಾಮಿ ವಂದಿಸಲಿದ್ದಾರೆ. ಇದು ಸರಕಾರಿ ಕಾರ್ಯಕ್ರಮವಾಗಿರುವುದರಿಂದಲೋ ಏನೋ, ಬೇರೆ ಯಾವುದೇ ಕನ್ನಡ ಪ್ರತಿನಿಧಿಗಳ ಹೆಸರು ಕಂಡಿಲ್ಲ. ರಾಷ್ಟ್ರಗೀತೆಯೊಂದಿಗೆ ಸಮಾರಂಭ ಕೊನೆಗೊಳ್ಳಲಿದೆ.