ಪ್ರಕೃತಿ ವಿಕೋಪ ಪರಿಹಾರಕ್ಕೆ 317ಕೋಟಿ ರೂ. ಹಾಗೂ ನೆರ, ಬರ ಪರಿಹಾರಕ್ಕೆ 2000 ಕೋಟಿ ರೂಪಾಯಿ ನೆರವನ್ನು ನೀಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಗುರುವಾರ ಕೇಂದ್ರ ಸಚಿವರನ್ನು ಭೇಟಿಯಾಗಿ ಕೋರಿಕೆ ಸಲ್ಲಿಸಿದೆ. ಆದರೆ ಸರ್ವಪಕ್ಷ ನಿಯೋಗದಲ್ಲಿ ಕಾಂಗ್ರೆಸ್, ಜೆಡಿಎಸ್ ಶಾಸಕರು ಗೈರುಹಾಜರಾಗಿದ್ದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗ ಇಂದು ಬೆಳಿಗ್ಗೆ ಕೇಂದ್ರದ ಕೃಷಿ ಸಚಿವ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ರಾಜ್ಯದ ಸಂಸದರು ಹಾಗೂ ಸಚಿವರು ರಾಜ್ಯದಲ್ಲಿ ಅತಿವೃಷ್ಟಿಯಿಂದ ಒಟ್ಟು 517ಕೋಟಿ ರೂ.ಆಸ್ತಿಪಾಸ್ತಿ ನಷ್ಟವಾಗಿದೆ. ಕೇಂದ್ರದ ಪ್ರಕೃತಿ ಪರಿಹಾರ ಸೂತ್ರದ ಪ್ರಕಾರ ರಾಜ್ಯಕ್ಕೆ 317.79ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಮನವಿ ಪತ್ರ ಸಲ್ಲಿಸಿದೆ.
ನೆರೆ ಪರಿಹಾರದ ಜೊತೆಗೆ ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೂ ಕ್ರಮ ಕೈಗೊಳ್ಳುವಂತೆ ರಾಜ್ಯ ನಿಯೋಗ ಕೃಷಿ ಸಚಿವರನ್ನು ಒತ್ತಾಯಿಸಿದೆ. ರಾಜ್ಯಕ್ಕೆ ಕೂಡಲೇ 1ಲಕ್ಷ ಟನ್ ಕಾಂಪ್ಲೆಕ್ಸ್ ಹಾಗೂ 50ಸಾವಿರ ಟನ್ ಎಂಓಪಿ ಗೊಬ್ಬರ ಸರಬರಾಜಿಗೆ ಮನವಿ ಸಲ್ಲಿಸಿದರು.
2008-09ನೇ ಸಾಲಿನ ಕೃಷಿ ಸಾಲದ ಬಾಕಿ 1,800ಕೋಟಿ ರೂ.ಗಳನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. ಈ ಕೂಡಲೇ ಹಣವನ್ನು ಬಿಡುಗಡೆ ಮಾಡುವಂತೆ ಸಹ ಕೇಂದ್ರ ಸಚಿವರಿಗೆ ರಾಜ್ಯದ ನಿಯೋಗ ಆಗ್ರಹಿಸಿತು.
ಸಭೆಯಲ್ಲಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ರಾಜ್ಯ ಸಭೆಯ ಉಪಸಭಾಪತಿ ರೆಹಮಾನ್ ಖಾನ್, ಆಸ್ಕರ್ ಫೆರ್ನಾಂಡಿಸ್, ಸಂಸದ ಧರಂಸಿಂಗ್ ಹಾಗೂ ಬಿಜೆಪಿ ಸಂಸದರು ಭಾಗವಹಿಸಿದ್ದರು.
ಮಲತಾಯಿ ಧೋರಣೆ ಇಲ್ಲ-ಮೊಯ್ಲಿ: ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿಯಲ್ಲಿ ಯಾವುದೇ ರೀತಿಯ ಮಲತಾಯಿ ಧೋರಣೆ ತಳೆದಿಲ್ಲ ಎಂದು ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ತೀವ್ರವಾಗಿ ಕಿಡಿಕಾರಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಎಲ್ಲಾ ರೀತಿಯ ನೆರವುಗಳನ್ನು ನೀಡುತ್ತಿದ್ದು ಅದನ್ನು ಸದ್ಭಳಕೆ ಮಾಡಿಕೊಳ್ಳದೆ ಕೇಂದ್ರದ ಮೇಲೆ ವಿನಾಕಾರಣ ಗೂಬೆ ಕೂರಿಸಲು ರಾಜ್ಯದ ಬಿಜೆಪಿ ಸರ್ಕಾರ ಇಲ್ಲ-ಸಲ್ಲದ ಆರೋಪ ಮಾಡುತ್ತಿದೆ ಎಂದರು.
ಉದ್ಯೋಗ ಖಾತರಿ ಯೋಜನೆ, ನೆರೆ-ಬರ ಪರಿಹಾರ, ಮೂಲಭೂತ ಸೌಕರ್ಯಗಳು ಸೇರಿದಂತೆ ಕರ್ನಾಟಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಹಣವನ್ನು ಕೇಂದ್ರ ಪ್ರತಿವರ್ಷ ಬಿಡುಗಡೆ ಮಾಡುತ್ತಿದೆ. ಆದರೂ ಕೇಂದ್ರ ನೀಡುವ ಹಣವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳದೆ, ನಿರ್ಲಕ್ಷ್ಯ ವಹಿಸುವ ರಾಜ್ಯ ಬಿಜೆಪಿ ಸರ್ಕಾರ ಪ್ರತಿಬಾರಿಯೂ ಕೇಂದ್ರದ ಮೇಲೆ ಗೂಬೆ ಕೂರಿಸಿ, ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.