ರಾಜ್ಯ ಸರ್ಕಾರ ದಿವಾಳಿ ಅಂಚಿನತ್ತ ಸಾಗಿದೆ, ಅದಕ್ಕಾಗಿ ನೆರವು ನೀಡಿ ಅಂತ ಕೋರಲು ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿದೆ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರದ ಅನುದಾನ ಸದ್ಭಳಕೆ ಮಾಡಿಕೊಳ್ಳದೆ ಪದೇ ಪದೇ ದೆಹಲಿಗೆ ನಿಯೋಗ ಕೊಂಡೊಯ್ಯಲು ಇದೇನು ಜಾಲಿ ಟ್ರಿಪ್ಪಾ ಎಂದು ವ್ಯಂಗ್ಯವಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕ ಅನುದಾನ ಹಾಗೂ ಯೋಜನಾ ಗಾತ್ರ ಹೆಚ್ಚಳ ಕುರಿತಂತೆ ಮುಖ್ಯಮಂತ್ರಿ ದೆಹಲಿಗೆ ನಿಯೋಗ ಕರೆದೊಯ್ದಿದ್ದಾರೆ. ರಾತ್ರೋರಾತ್ರಿ ಆಹ್ವಾನ ನೀಡಿ ಪ್ರತಿಪಕ್ಷಗಳು ಸಹಕರಿಸಲಿಲ್ಲ ಎಂದು ಆರೋಪ ಮಾಡುತ್ತಾರೆ.
ಕನಿಷ್ಠ ಒಂದು ವಾರದ ಮುಂಚೆ ಮಾಹಿತಿ ನೀಡಬೇಕಿತ್ತು. ಕರೆದಾಗ ಓಡಿಹೋಗಲಿಕ್ಕೆ ನಾವೇನು ಆಳುಗಳಾ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ನಿಯೋಗ ಕರೆದೊಯ್ಯುವ ಅಗತ್ಯವಿಲ್ಲ. ಆಯಾ ಖಾತೆಗಳಿಗೆ ಸಂಬಂಧಿಸಿದ ಸಚಿವರು, ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.
ಒಂದು ನಿಯೋಗ ಕರೆದೊಯ್ಯುವುದರಿಂದ 50ಲಕ್ಷ ರೂ.ವೆಚ್ಚವಾಗಲಿದೆ. ಇದರಿಂದ ವಿಮಾನ, ಐಷಾರಾಮಿ ಹೊಟೇಲ್ ಸೌಲಭ್ಯ ಸಚಿವರಿಗೆ ದೊರೆಯಲಿದೆ. ಇದೇ ಹಣವನ್ನು ಅಭಿವೃದ್ಧಿಗೆ ಬಳಸಬಹುದು. ಪದೇ ಪದೇ ಪ್ರತಿಪಕ್ಷಗಳ ನಿಯೋಗ ಕರೆದೊಯ್ಯುವ ಚಾಳಿ ಸರಿಯಲ್ಲ ಎಂದು ಹೇಳಿದರು.