ಒಂದೆಡೆ ತಿರುವಳ್ಳವರ್ ಪ್ರತಿಮೆ ಅನಾವರಣದಿಂದ ಪೇಚಿಗೆ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇನ್ನೊಂದೆಡೆ ತಮ್ಮ ವಿರುದ್ಧವೇ ಬಂಡಾಯ ಸಾರಲು ಮುಂದಾಗಿರುವ ಅತೃಪ್ತ ಶಾಸಕರ ಕ್ರಮದಿಂದ ಗೊಂದಲ ಎದುರಿಸುವಂಥ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಉದ್ಯಾನ ನಗರಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ, ಪಕ್ಷ ಅಶಿಸ್ತನ್ನು ಸಹಿಸೊಲ್ಲ ಎಂಬ ಎಚ್ಚರಿಕೆಯನ್ನು ಪಕ್ಷದ ರಾಜ್ಯಾಧ್ಯಕ್ಷ ರಾಜನಾಥ್ ಸಿಂಗ್ ರವಾಸಿದ್ದರು. ಆ ನಿಟ್ಟಿನಲ್ಲಿ ಪರೋಕ್ಷ ಎಚ್ಚರಿಕೆ ಎಂಬಂತೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಷೋಕಾಸ್ ನೋಟಿಸ್ ನೀಡಿರುವುದೇ ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಹೊಗೆ ಭುಗಿಲೇಳುವಂತಾಗಿದೆ.
ಇದಕ್ಕೆ ತಲೆ ಕೆಡಿಸಿಕೊಂಡದಂತಿರುವ ಕೆಲ ಶಾಸಕರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆನ್ನುವುದು ಮುಖ್ಯಮಂತ್ರಿಗಳನ್ನು ಕಂಗೆಡಿಸಿದೆ.ಶಾಸಕ ರೇಣುಕಾಚಾರ್ಯ ಮುಖ್ಯಮಂತ್ರಿಗಳ ವಿರುದ್ಧ ಅತೃಪ್ತ ಶಾಸಕರ ಸಹಿ ಸಂಗ್ರಹ ನಡೆಸುತ್ತಿದ್ದಾರೆನ್ನುವ ಸಂಗತಿ ದೊಡ್ಡ ಕುತೂಹಲವನ್ನೇ ಹುಟ್ಟು ಹಾಕಿತ್ತು.
ಈ ಬಗ್ಗೆ ಹೊನ್ನಾಳಿ ಶಾಸಕರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿತ್ತು. ಆದ್ರೆ ಇದು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಅನೇಕರನ್ನು ಕೆರಳಿಸಿತ್ತು. ಆದ್ರೆ ಪಕ್ಷದ ವರಿಷ್ಠರ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ರೇಣುಕಾಚಾರ್ಯ ಬುಧವಾರ ಗುಪ್ತ ಸಭೆಯೊಂದನ್ನು ನಡೆಸಿದ್ದಾರೆನ್ನಲಾಗಿದೆ. ಇದರಲ್ಲಿ ಅತೃಪ್ತ ಬಣದ 15 ಶಾಸಕರು ಪಾಲ್ಗೊಂಡು ಮುಖ್ಯಮಂತ್ರಿಗಳ ಕಾರ್ಯವೈಖರಿ ಬಗ್ಗೆ ಅತೃಪ್ತಿ-ಅಸಹನೆ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.
ಪಕ್ಷದೊಳಗಿನ ಅತೃಪ್ತಿ ಬಹಿರಂಗಗೊಳಿಸುವ ಪ್ರಶ್ನೆಯೇ ಇಲ್ಲ. ಎಲ್ಲವೂ ಸರಿಯಾಗಿದೆ. ಇದು ಕೇವಲ ಮಾಧ್ಯಮಗಳ ಸೃಷ್ಟಿಯಷ್ಟೇ ಎಂದಿರುವ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರೂ ಆಗಿರುವ ರೇಣುಕಾಚಾರ್ಯ ಪಕ್ಷದ ವರಿಷ್ಠರು ಜಾರಿಗೊಳಿಸಿರುವ ಷೋಕಾಸ್ ನೋಟಿಸ್‌ಗೆ ಉತ್ತರಿಸುವುದಾಗಿ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮುಖ್ಯಮಂತ್ರಿಗಳಲ್ಲಿ ಕಸಿವಿಸಿ ಉಂಟು ಮಾಡಿರುವುದಂತೂ ಸ್ಪಷ್ಟ.ಈ ಹಿಂದೆಯೂ ರೇಣುಕಾಚಾರ್ಯ ಮುಖ್ಯಮಂತ್ರಿಗಳ ವಿರುದ್ಧ ಹರಿಹಾಯ್ದು ನಂತ್ರ ಸಮಾಲೋಚನೆ ನಂತ್ರ ಸಮಾಧಾನಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.