ರಾಜ್ಯದಲ್ಲಿ ಆಗಸ್ಟ್ 18ರಂದು ನಡೆಯಲಿರುವ ಐದು ವಿಧಾನಸಭಾ ಉಪಚುನಾವಣೆ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ. ಈ ಕ್ಷೇತ್ರಗಳ ಪೈಕಿ ಹೆಚ್ಚು ಕುತೂಹಲ ಕೆರಳಿಸಿರುವ ಬೆಂಗಳೂರಿನ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು ತಮ್ಮ ವರಸೆಯನ್ನು ಆರಂಭಿಸಿದ್ದಾರೆ.
ಗೋವಿಂದರಾಜನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ನಾನಾ ಭರವಸೆ-ಆಶ್ವಾಸನೆಗಳ ಮೂಲಕ ಮತದಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ. ಶಾಸಕ ಎಂ.ಕೃಷ್ಣಪ್ಪ ಅವರ ಪುತ್ರ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಹುರುಪಿನಲ್ಲಿ ಕ್ಷೇತ್ರದಾದ್ಯಂತ ಅಡ್ಡಾಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ, ಸಚಿವ ಸೋಮಣ್ಣ ಇದಕ್ಕೆ ಕಡಿಮೆ ಇಲ್ಲವೆನ್ನುವಂತ ರೀತಿಯಲ್ಲಿ ತಮ್ಮ ದಂಡನ್ನು ಕಟ್ಟಿಕೊಂಡು ಸಂಚಾರ ನಡೆಸಿ ಮತದಾರರ ಮನಗೆಲ್ಲಲು ಹರಸಾಹಸ ನಡೆಸುತ್ತಿದ್ದಾರೆ.
ಶತಾಯಗತಾಯ ಗೆಲ್ಲಿಸಲೇಬೇಕೆಂಬ ನಿರ್ಧಾರದಲ್ಲಿ ಪ್ರತ್ಯೇಕ ಪಕ್ಷಗಳ ವರಿಷ್ಠರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ವತಿಯಿಂದ ಸಚಿವರಾದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಿಯಕೃಷ್ಣ ಪರ ಪ್ರಚಾರ ನಡೆಸುವ ಮೂಲಕ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಬಿಜೆಪಿ ಪರವಾಗಿ ಸಚಿವರ ದೊಡ್ಡ ದಂಡೇ ಕ್ಷೇತ್ರಾದ್ಯಂತ ಸಂಚಾರ ನಡೆಸಿ ಸೋಮಣ್ಣ ಗೆಲುವಿಗೆ ಕಾರಣಕರ್ತರಾಗಬೇಕೆಂದು ಮತದಾರರ ಮನವೊಲಿಸುವಲ್ಲಿ ನಿರತವಾಗಿದೆ. ಹಲವಾರು ಭರವಸೆ ನೀಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೆ ಪ್ರಚಾರದಲ್ಲಿ ತೊಡಗುತ್ತಿರುವ ಮುಖಂಡರು ಗೆಲ್ಲಲೇಬೇಕೆಂಬ ಹಠದಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ.
ಈ ನಡುವೆ ಎಲ್ಲಾ ಅಭ್ಯರ್ಥಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮಠ ಮಾನ್ಯಗಳನ್ನು ಸಂಪರ್ಕಿಸುತ್ತಿದ್ದಾರೆ. ದಾನ ಧರ್ಮ ಮಾಡುತ್ತಿದ್ದಾರೆ. ಇದು ಚುನಾವಣಾ ಗಿಮಿಕ್ ಎನ್ನುವ ಸತ್ಯ ಅರಿತಿರುವ ಮತದಾರ ಅಭ್ಯರ್ಥಿಗಳ ಹಣೆ ನಿರ್ಧರಿಸಲಿದ್ದಾರೆ.