ವಿವಾದಿತ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಎಲ್ಲ ಧರ್ಮಗಳ ಮಕ್ಕಳಿಗೂ ಮುಕ್ತ ಪ್ರವೇಶವಿರುವ ಶಾಲೆ ಮತ್ತು ಆಟದ ಮೈದಾನ ಅಥವಾ ಆಸ್ಪತ್ರೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ನಿರ್ಮಿಸಲಿ. ಇಸ್ಲಾಂ ಧರ್ಮೀಯರಿಗೆ ವರ್ಷಕ್ಕೆರಡು ದಿನ ಈ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶ ಇರಲಿ ಎಂಬ ಸಲಹೆಯನ್ನು ಸರ್ವೊಚ್ಚ ನ್ಯಾಯಾಲಯ ನೀಡಿದೆ.
ಮಹಾನಗರಪಾಲಿಕೆ ಶಾಲೆ ನಿರ್ಮಿಸುವ ಸಲಹೆಗೆ ಅಂಜುಮಾನ್-ಇ-ಇಸ್ಲಾಮ್ ಒಪ್ಪಿಗೆ ನೀಡಿ ಉಭಯ ಪಕ್ಷಗಳು ಈ ವಿವಾದವನ್ನು ಸೌಹಾರ್ದತಯುತವಾಗಿ ಬಗೆಹರಿಸಿಕೊಳ್ಳಲು ಇದು ಕಡೆಯ ಅವಕಾಶ ಎಂದು ನ್ಯಾಯಾಲಯ ಹೇಳಿದೆ.
ಈ ಸಂಬಂಧ ವಾದಿಗಳು ಮತ್ತು ಪ್ರತಿವಾದಿಗಳು ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಸೌಹಾರ್ದಯುತ ಒಪ್ಪಂದಕ್ಕೆ ಬರುವುದೇ ಆದಲ್ಲಿ ನಾಲ್ಕು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.
ಇಲ್ಲವಾದರೆ ವಾದ-ಪ್ರತಿವಾದಕ್ಕೆ ತಯಾರಾಗಿ ಬನ್ನಿ, ಉಭಯ ಪಕ್ಷಗಳನ್ನು ಆಲಿಸಿದ ನಂತರ ನ್ಯಾಯಾಲಯ ಮೆರಿಟ್ಸ್ ಆಧಾರದ ಮೇಲೆ ತೀರ್ಪು ನೀಡಲಿದೆ ಎಂದು ನ್ಯಾಯಮೂರ್ತಿಗಳಾದ ದಲ್‌ಬೀರ್ ಭಂಡಾರಿ ಮತ್ತು ಮುಕುಂದಕಮ್ ಶರ್ಮ ಅವರನ್ನು ಒಳಗೊಂಡ ನ್ಯಾಯಪೀಠ ಗುರುವಾರ ಹೇಳಿದೆ. ವಿಚಾರಣೆಯನ್ನು ಅಕ್ಟೋಬರ್ ಆರಕ್ಕೆ ಮುಂದೂಡಲಾಯಿತು.
1995ರಿಂದ ಸರ್ವೊಚ್ಚ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಈ ವಿಚಾರ ಕುರಿತು ರಾಜ್ಯ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಉಭಯ ಪಕ್ಷಗಳು ರಾಜಿ ಮಾಡಿಕೊಳ್ಳಲಿ ಎಂದು ನ್ಯಾಯಾಲಯ ಸೂಚಿಸಿತ್ತು. ರಾಜ್ಯ ಸರ್ಕಾರ ನಡೆಸಿರುವ ನಾಲ್ಕೈದು ರಾಜಿ ಸಭೆಗಳಲ್ಲಿ ಯಾವುದೇ ಪರಿಹಾರ ಮೂಡಿ ಬಂದಿಲ್ಲವಾಗಿತ್ತು.