ಎರಡಕ್ಕಿಂತ ಹೆಚ್ಚು ಬಾರಿ ರಸ್ತೆ ನಿಯಮ ಉಲ್ಲಂಘಿಸಿದವರ ಲೈಸೆನ್ಸ್ ಮುಟ್ಟುಗೋಲು ಹಾಕಿಕೊಳ್ಳಲು ಶೀಘ್ರದಲ್ಲೇ ಸಾರಿಗೆ ಅಧಿಕಾರಿಗಳು ಆಂದೋಲನ ಪ್ರಾರಂಭಿಸಲಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.
ಆರು ತಿಂಗಳ ಕಾಲ ಲೆಸೆನ್ಸ್ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಬಳಿಕ ಲೆಸೆನ್ಸ್ ಮರಳಿ ಪಡೆಯಬೇಕೆಂದರೆ ಆ ವ್ಯಕ್ತಿ ಇನ್ನೊಮ್ಮೆ ಡ್ರೈವಿಂಗ್ ಟೆಸ್ಟ್ ಪಾಸಾಗಬೇಕು ಎಂದು ಹೇಳಿದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲು ಬೆಂಗಳೂರಿನ ಎಂ.ಎಸ್.ರಾಮಯ್ಯ ಸ್ಮಾರಕ ಆಸ್ಪತ್ರೆಯಲ್ಲಿ ಗುರುವಾರ ಹಮ್ಮಿಕೊಂಡ 'ಹದಿಹರೆಯದವರು ಮತ್ತು ರಸ್ತೆ ಸುರಕ್ಷತೆ' ಎಂಬ ಜಾಗೃತಿ ಆಂದೋಲನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಲದೇ ವಾಹನ ಚಾಲನಾ ಪರವಾನಿಗೆ ಪಡೆಯಲು ವಿದ್ಯಾರ್ಥಿಗಳು ಪರದಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನಿಮ್ಮ ಶಾಲೆ, ಕಾಲೇಜಿನಲ್ಲೇ ಇನ್ನು ನಿಮಗೆ ಡ್ರೈವಿಂಗ್ ಲೈಸೆನ್ಸ್ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಹೇಳಿದರು. ಕನಿಷ್ಠ 16ವರ್ಷ ತುಂಬಿದ ಮಕ್ಕಳಿಗೂ ಲೈಸೆನ್ಸ್ ನೀಡಲಾಗುತ್ತದೆ. ಆದರೆ, ಇದಕ್ಕೆ ಪೋಷಕರ ಅನುಮತಿ ಅಗತ್ಯ ಮತ್ತು 50ಸಿಸಿ ಮೊಪೆಡ್‌ಗೆ ಮಾತ್ರ ಲೈಸೆನ್ಸ್ ನೀಡಲಾಗುವುದು ಎಂದು ಹೇಳಿದರು.
ಮಕ್ಕಳಿಗೆ ಆರ್‌ಟಿಒ ಕಚೇರಿಗೆ ಬರುವ ತೊಂದರೆ ತಪ್ಪಿಸುವ ಸಲುವಾಗಿ ಆಯಾ ಶಾಲಾ-ಕಾಲೇಜುಗಳಲ್ಲಿ ಲೆಸೆನ್ಸ್ ವಿತರಣೆಗೆ ಸಾರಿಗೆ ಇಲಾಖೆ ಚಿಂತಿಸುತ್ತಿದೆ. ಖುದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಲೈಸೆನ್ಸ್ ವಿತರಿಸಲಿದ್ದಾರೆ ಎಂದು ತಿಳಿಸಿದರು.