ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಗೆ 15 ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿರುವ ದುಷ್ಕರ್ಮಿಗಳು ಇಲ್ಲದಿದ್ದಲ್ಲಿ ನಿಮ್ಮ ಸೇರಿ ಸಿಎಂ ಅವರನ್ನು ಕೊಲೆ ಮಾಡುವುದಾಗಿ ಹೇಳಿದ್ದಲ್ಲದೆ, ಸಿಎಂ ವೈಯಕ್ತಿಕ ವಿಚಾರಗಳ ಸಿಡಿಯನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿರುವ ಕುರಿತು ಶಿವಮೊಗ್ಗ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಎಂ ಆಪ್ತ ಕಾರ್ಯದರ್ಶಿ ಚಂದ್ರಶೇಖರ್ ಅವರಿಗೆ ಕಳೆದ ತಿಂಗಳು 25ರಂದು ದೂರವಾಣಿ ಕರೆ ಮಾಡಿರುವ ದುಷ್ಕರ್ಮಿಗಳು, 15ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಬೇಡಿಕೆ ಇಟ್ಟಿದ್ದು, ಇಲ್ಲದಿದ್ದಲ್ಲಿ ಸಿಎಂ ಅವರನ್ನು ಹತ್ಯೆಗೈಯುವುದಾಗಿ ಹೇಳಿ, ವೈಯಕ್ತಿಕ ವಿಚಾರಗಳ ಸಿಡಿಯನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ವಿ. ಎಸ್. ಉಗ್ರಪ್ಪ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ನಾಡಿನ ಎಲ್ಲ ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಸಿಎಂ ಮಾನ ಹರಾಜು ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ.
ಈ ದೂರವಾಣಿ ಕರೆ ಹಲವು ಬಾರಿ ಬಂದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರು ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ದೂರನ್ನು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್, ಹೊಸಕೋಟೆ, ಹೊಸೂರು, ಹುಬ್ಬಳ್ಳಿ, ಭದ್ರಾವತಿ, ಶಿವಮೊಗ್ಗಗಳ ಕಾಯಿನ್ ಬಾಕ್ಸ್ ಗಳಿಂದ ಸುಮಾರು 30 ಕರೆಗಳು ಬಂದಿವೆ. ಈ ಎಲ್ಲ ನಂಬರುಗಳನ್ನು ನಾನು ಪೊಲೀಸರಿಗೆ ಕೊಟ್ಟಿದ್ದೇನೆ ಎಂದು ಚಂದ್ರಶೇಖರ್ ತಿಳಿಸಿದ್ದಾರೆ. ಈ ವಿಷಯವನ್ನು ಯಡಿಯೂರಪ್ಪ ಅವರಿಗೂ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
ಮುಖ್ಯಮಂತ್ರಿಗಳ ವೈಯಕ್ತಿಕ ಸಿಡಿ ಇದೆ ಎಂದು ಬೆದರಿಕೆ ಒಡ್ಡಿ, ಭಾರೀ ಮೊತ್ತ ನೀಡುವಂತೆ ಬೇಡಿಕೆ ಇಟ್ಟಿರುವ ಪ್ರಕರಣದ ಬಗ್ಗೆ ದೂರನ್ನು ದಾಖಲಿಸಿಕೊಂಡಿರುವ ಪೊಲೀಸರು, ದೂರವಾಣಿ ನಂಬರ್‌ಗಳೊಂದಿಗೆ ತನಿಖೆಯನ್ನು ಆರಂಭಿಸಿರುವುದಾಗಿ ಹೇಳಿದ್ದಾರೆ.
ಇಬ್ಬರ ಬಂಧನ: ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವೆಂಕಟೇಶ್ ಮತ್ತು ರಾಘುವೇಂದ್ರ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ವೆಂಕಟೇಶ್ ವೈದ್ಯಾಧಿಕಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ದಿಢೀರ್ ಶ್ರೀಮಂತರಾಗುವ ಆಸೆಯಿಂದ ಮುಖ್ಯಮಂತ್ರಿಗಳಿಂದ ಹಣ ವಸೂಲಿ ಮಾಡುವ ನಿಟ್ಟಿನಲ್ಲಿ ಜುಲೈ 25ರಿಂದ ಬೆಂಗಳೂರಿನಿಂದ ದೂರವಾಣಿ ಕರೆ ಮಾಡುತ್ತಿದ್ದರೆಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಸಿಎಂಗೆ ಸಂಬಂಧಿಸಿದ ವೈಯಕ್ತಿಕ ವಿಚಾರಣಗಳ ಸಿಡಿ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.