ಮಂಗಳೂರಿನಲ್ಲಿ ಒಂಬತ್ತು ಎಚ್1ಎನ್1 ಪ್ರಕರಣ ಪತ್ತೆಯಾಗಿದ್ದು, ಇದರಲ್ಲಿ ಮೂರು ವಿದ್ಯಾರ್ಥಿಗಳಿಗೆ ಸೋಂಕು ಇರುವುದು ಖಚಿತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಒಂಬತ್ತು ಪ್ರಕರಣ ಪತ್ತೆಯಾಗುವ ಮೂಲಕ ರಾಜ್ಯಕ್ಕೂ ಹಂದಿಜ್ವರ ಕಾಲಿಟ್ಟಂತಾಗಿದೆ. ಹಂದಿಜ್ವರದ ಸೋಂಕು ತಗುಲಿರುವವರು ನಗರದ ಕೆಎಂಸಿ ಮತ್ತು ಫಾ.ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ಆಗಿದ್ದಾರೆ.
ಕೆಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಕಲಿಯುತ್ತಿರುವ ಮೂವರು ವಿದೇಶಿ ವಿದ್ಯಾರ್ಥಿಗಳು ರಜೆ ಮೇಲೆ ಮಲೇಷ್ಯಾಕ್ಕೆ ತೆರಳಿದ್ದರು. ವಾಪಸಾದ ವೇಳೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಈ ಸೋಂಕು ಪತ್ತೆಯಾಗಿತ್ತು. ನಾಲ್ಕನೆ ವಿದ್ಯಾರ್ಥಿ ಸುರತ್ಕಲ್ ಎನ್‌ಇಟಿ ಕಾಲೇಜ್ ವಿದ್ಯಾರ್ಥಿಯಾಗಿದ್ದು, ಆತನ ರಕ್ತದ ಸ್ಯಾಂಪಲ್ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಜಗನ್ನಾಥ್ ತಿಳಿಸಿದ್ದಾರೆ.
ಮಲೇಷ್ಯಾ ಮೂಲದ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ಒಂಬತ್ತು ಮಂದಿಯಲ್ಲಿ ಹಂದಿಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಅವರ ರಕ್ತದ ಮಾದರಿಯನ್ನು ಮಣಿಪಾಲದ ವೈರಾಣು ಪ್ರಯೋಗಾಲಯ ಮತ್ತು ದೆಹಲಿಯ ರಾಷ್ಟ್ರೀಯ ಸಾಂಕ್ರಾಮಿಕ ರೋಗಸಂಸ್ಥೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಎಚ್1ಎನ್1 ಸೋಂಕು ಇರುವುದು ಖಚಿತವಾಗಿದೆ. ಒಬ್ಬ ವಿದ್ಯಾರ್ಥಿಯ ರಕ್ತದ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ.