ಕುಟುಂಬ ಸಮೇತ ಶಾಸಕರ ವಿದೇಶಯಾನ
ಬೆಂಗಳೂರಿಗೆ, ಶುಕ್ರವಾರ, 7 ಆಗಸ್ಟ್ 2009( 17:02 IST )
ಶಾಸಕರಿಗೆ ಇದೀಗ ಮತ್ತೊಂದು ವಿದೇಶಿ ಪ್ರವಾಸ ಸುಯೋಗ, ಉಭಯ ಸದನಗಳ ಸ್ಪೀಕರ್‌ಗಳು ಸೇರಿ ಶಾಸಕರ ತಂಡವೊಂದು ಶುಕ್ರವಾರ ಇಂಗ್ಲೆಂಡ್, ಅಮೆರಿಕ ಸೇರಿದಂತೆ ಐದು ರಾಷ್ಟ್ರಗಳಿಗೆ ಅಧ್ಯಯನ ಪ್ರವಾಸ ಕೈಗೊಳ್ಳುತ್ತಿದೆ. ಮತ್ತೆ ಕೆಲವು ಶಾಸಕರ ಸಕುಟುಂಬ ಪರಿವಾರಗಳೂ ವಿದೇಶಕ್ಕೆ ಹೊರಡಲು ಸಜ್ಜಾಗಿವೆ.
ವಿಧಾನಸಭೆ ಅಧ್ಯಕ್ಷ ಜಗದೀಶ್ ಶೆಟ್ಟರ್, ವಿಧಾನಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ನೇತೃತ್ವದ ವಿಧಾನಮಂಡಲದ ಉಭಯ ಸದನಗಳ ಗ್ರಂಥಾಲಯ ಸಮಿತಿಯ ಒಟ್ಟು 11ಮಂದಿ ಶಾಸಕರು ಮತ್ತು ಮೂವರು ಅಧಿಕಾರಿಗಳು 15ದಿನಗಳ ಕಾಲ ಇಂಗ್ಲಂಡ್, ಅಮೆರಿಕ, ಇಟಲಿ, ಫ್ರಾನ್ಸ್ ಮತ್ತು ಸಿಟ್ಜರ್‌ಲ್ಯಾಂಡ್ ಪ್ರವಾಸ ಮಾಡಲಿದ್ದಾರೆ.
ಈ ತಂಡದೊಂದಿಗೆ ಉಭಯ ಸದನಗಳ ಮುಖ್ಯಸ್ಥರ ಕುಟುಂಬ ಸದಸ್ಯರೂ ಸೇರಿದಂತೆ ಶಾಸಕರ ಕುಟುಂಬ ಸದಸ್ಯರೂ ಇದ್ದಾರೆ. ಈ ತಂಡದಲ್ಲಿ ಉಭಯ ಸದನಗಳ ಸದಸ್ಯರೂ ಇಧ್ದಾರೆ.
ವೀರಣ್ಣ ಮತ್ತಿಕಟ್ಟಿ, ಜಗದೀಶ್ ಶೆಟ್ಟರ್, ವಿಧಾನಸಭೆ ಸದಸ್ಯರಾದ ಎಂ.ನಾರಾಯಣ ಸ್ವಾಮಿ, ಕೆ.ಲಕ್ಷ್ಮಿನಾರಾಯಣ, ಎಸ್.ವಿ.ರಾಮಚಂದ್ರ,ಎನ್.ಎ.ಹ್ಯಾರಿಸ್, ಎಚ್.ಎಸ್.ಪ್ರಕಾಶ್, ವಿಧಾನಪರಿಷತ್ ಸದಸ್ಯರಾದ ಮುಖ್ಯಮಂತ್ರಿ ಚಂದ್ರು, ಚಂದ್ರಶೇಖರ ಕಂಬಾರ ಮತ್ತು ಡಾ.ಶ್ರೀನಾಥ್, ವಿಧಾನಸಭೆಯ ಉಪ ಕಾರ್ಯದರ್ಶಿ ಕೆ.ನೂರ್ ಮೊಹ್ಮದ್, ಸೋಲೋಮನ್ ಮತ್ತು ಮುಖ್ಯಗ್ರಂಥಪಾಲೆ ಅನಸೂಯ ಎನ್.ದೇವಗಿರಿ ಪ್ರವಾಸಿಗರ ಪಟ್ಟಿಯಲ್ಲಿದ್ದಾರೆ.
ಕುಟುಂಬದ ಸದಸ್ಯರಾದ ಶಿಲ್ಪಾ ಶೆಟ್ಟರ್, ಪ್ರಶಾಂತ್ ಶೆಟ್ಟರ್, ಶಕುಂತಲಾ ವೀರಣ್ಣ ಮತ್ತಿಕಟ್ಟಿ, ವಿಜಯ ಮತ್ತಿಕಟ್ಟಿ, ಇಂದಿರಾ ರಾಮಚಂದ್ರ, ಹಂಜುಗೌಡನಹಳ್ಳಿ ಮಲ್ಲೇಗೌಡ, ಸರಸ್ವತಮ್ಮ ನಾರಾಯಣಸ್ವಾಮಿ, ಲಲಿತಾಮಣಿ, ಎಚ್.ಎಸ್.ಪ್ರಕಾಶ್, ಗೀತಾಗೌಡ ಬಾಳೆ ಹೊನ್ನೂರು, ಮಲ್ಲಾಜಮ್ಮ, ಪ್ರಕಾಶ್ ರಾಠೋಡ್, ಸುಜಾತ ರಾಥೋಡ್, ಶಿವಯೋಗಿ ಸ್ವಾಮಿ, ರಾಜಿ ರೆಡ್ಡಿ ಕೊನ್ನಿ, ಇಂದ್ರಾ ಆರ್ಯ, ವಿಶ್ವನಾಥ್ ಗೌಡ, ಪದ್ಮಾ ಸೇರಿದ್ದಾರೆ.
ಪ್ರವಾಸದ ವೇಳೆ ಅಧ್ಯಯನ ತಂಡದ ದಿನದ ಭತ್ಯೆಯನ್ನು ಸಚಿವಾಲಯವೇ ಭರಿಸಲಿದೆ. ಅಂದರೆ, ಪ್ರತಿಯೊಬ್ಬ ಸದಸ್ಯರಿಗೆ ದಿನಕ್ಕೆ 350 ಡಾಲರ್(17,500ರೂ.) ದಿನಭತ್ಯೆಯನ್ನು ನೀಡಲಾಗುತ್ತದೆ.