ಮಂತ್ರವಾದಿ ಚಾಂದ್‌ಪಾಷಾ (38) ಕೊಲೆಯ ಪ್ರಕರಣದ ಹಿನ್ನೆಲೆಯಲ್ಲಿ 5ಮಂದಿ ಕೊಲೆ ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆ.2ರಂದು ರಾತ್ರಿ ರಾಚೇನಹಳ್ಳಿ ಅಂಜನಾದ್ರಿ ಬಡಾವಣೆಯಲ್ಲಿ ಮಂತ್ರವಾದಿ ಚಾಂದ್‌ಪಾಷಾನನ್ನು 13ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ ಆರೋಪದ ಮೇಲೆ ರಾಚೇನಹಳ್ಳಿಯ ಬಾಬು ಅಲಿಯಾಸ್ ಚಂಬರ(31), ಮುಸ್ಲಿಂ ಕಾಲೋನಿಯ ಅನೀಸ್ ಅಹಮದ್(30), ವಿನೋಭಾನಗರದ ಮೊಹಮದ್ ಮಜರ್ (32), ರಾಚೇನಹಳ್ಳಿಯ ಜೆರಾಲ್ಡ್(30), ಡಿಜೆ ಹಳ್ಳಿಯ ಮೌನು ಅಲಿಯಾಸ್ ಮಕ್ಸುದ್ ಅಹಮದ್(26) ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಫ್ರೇಜರ್ ಟೌನ್ ಕೆಂಚಪ್ಪರಸ್ತೆಯ ವಾಸಿ, ಚಾಂದ್‌ಪಾಷಾ ಮೊದಲು ದುಬೈನಲ್ಲಿ ವಾಹನ ಚಾಲಕನಾಗಿದ್ದ, ವಾಪಸ್ ಭಾರತಕ್ಕೆ ಬಂದ ಮೇಲೆ ಮಂತ್ರವಾದಿ(ಅಮೀನ) ಕೆಲಸ ಮಾಡಿಕೊಂಡಿದ್ದ, ಹೈದರಾಬಾದ್ ವ್ಯಕ್ತಿಗಳ ಮುಖಾಂತರ ಮಂತ್ರವಾದಿ ವಿದ್ಯೆ ಕಲಿತು, ಚೆನ್ನೈ ಇತರೆಡೆ ಕೆಲಸಮಾಡಿಕೊಂಡಿದ್ದ.
ಮಂತ್ರವಾದಿ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಸೈಯದ್ ಅಸ್ಲರ್ ಆಲಿ ಹಾಗೂ ಚಾಂದ್‌ಪಾಷಾ ನಡುವೆ ಪೈಪೋಟಿಯ ಜತೆಗೆ ದ್ವೇಷ ಬೆಳೆದಿತ್ತು. ಈ ಬಗ್ಗೆ ಆತ ಹಲವಾರು ಜನರೊಡನೆ ಹೇಳಿಕೊಂಡಿದ್ದ. ಅಸ್ಗರ್ ಅಲಿಯೇ ಖಾಯಿಲೆ ಬಿದ್ದಾಗ ಚಾಂದ್‌ಪಾಷಾ ಮಾಟಮಂತ್ರ ಪ್ರಯೋಗ ಮಾಡಿಕೊಂಡಿದ್ದಾನೆಂದು ಹೇಳಿ ಆಸ್ಪತ್ರೆಗೆ ಸೇರಿದ ಮೂರು ದಿನದಲ್ಲಿಯೇ ಆತ ಮೃತಪಟ್ಟಿದ್ದ.
ಈ ಹಿನ್ನೆಲೆಯಲ್ಲಿಯೇ ಅಸ್ಗರ್ ಸ್ನೇಹಿತರು ಚಾಂದ್‌ಪಾಷಾನನ್ನು ಕೊಲೆ ಮಾಡಿದ್ದರು. ಆ.2ರಂದು ಮಧ್ಯರಾತ್ರಿ ವೆಂಕಟೇಶಪುರದಿಂದ ಚಾಂದ್‌ಪಾಷಾನನ್ನು ಆರೋಪಿಗಳು 2ವಾಹನಗಳಲ್ಲಿ ಅಪಹರಣ ಮಾಡಿ ಹಲ್ಲೆ ಮಾಡುವಾಗ ಚಾಂದ್‌ಪಾಷಾನ ಕೂದಲು ಮತ್ತು ಮಣ್ಣಿನಿಂಗ ಆರೋಪಿಗಳ ಮೇಲೆ ಮಾಟ ಪ್ರಯೋಗ ಆರಂಭಿಸಿದಾಗ ಆರೋಪಿಗಳು ತಿರುಗಿಬಿದ್ದು, ಕೊಲೆ ಮಾಡಿದ್ದರು.