ಅನರ್ಹರು ಪಡಿತರ ಚೀಟಿ ಹೊಂದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಎಚ್.ಹಾಲಪ್ಪ ಎಚ್ಚರಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರು, ಶ್ರೀಮಂತರು, ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ದೂರುಗಳಿವೆ. ಸ್ವ ಇಚ್ಛೆಯಿಂದ ಅವರು ಬಿಪಿಎಲ್ ಚೀಟಿಯನ್ನು ವಾಪಸು ಮಾಡಿದರೆ ಒಳಿತು. ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಂದಿನಿಂದ ಒಂದು ತಿಂಗಳ ಕಾಲ ಇಂತಹ ಪಡಿತರ ಚೀಟಿ ಪತ್ತೆ ಹಚ್ಚುವ ಕಾರ್ಯ ರಾಜ್ಯಾದ್ಯಂತ ನಡೆಯಲಿದೆ. ಅರ್ಹರಲ್ಲದವರು ಬಿಪಿಎಲ್ ಪಡಿತರ ಚೀಟಿ ವಾಪಸು ಮಾಡುವುದು ಸೂಕ್ತ. ಒಂದು ತಿಂಗಳ ನಂತರ ನಿರ್ದಾಕ್ಷಿಣ್ಯವಾಗಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇಲಾಖೆಯ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಗಳ ವ್ಯವಸ್ಥಾಪಕರು ತಪಾಸಣೆ ಕೈಗೊಳ್ಳಲಿದ್ದಾರೆ.
ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಡುಗಳು ಹೊಂದಿರುವ ಬಗ್ಗೆ ದೂರುಗಳಿವೆ. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.