ನಗರದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣ ಸಮಾರಂಭದ ಆಹ್ವಾನ ಪತ್ರಿಕೆಯನ್ನು ತಮಿಳಿನಲ್ಲಿ ಮುದ್ರಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ಪ್ರತಿಭಟನೆ ನಡೆಸಿತು.
ನಗರದ ಕನ್ನಡ ಭವನದ ಎದುರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಿಗರ ವಿರೋಧದ ನಡುವೆಯೂ ಸರ್ಕಾರ ತಿರುವಳ್ಳುವರ್ ಪ್ರತಿಮೆಯನ್ನು ಅನಾವರಣ ಮಾಡಲು ಮುಂದಾಗಿರುವುದನ್ನು ಖಂಡಿಸಿದ ನಾರಾಯಣ ಗೌಡ, ಆಗಸ್ಟ್ 9ರಂದು ಸರ್ಕಾರ ಪ್ರತಿಮೆ ಅನಾವರಣಕ್ಕೆ ಮುಂದಾಗಿದೆ.
ಅಲ್ಲದೇ, ಆಹ್ವಾನ ಪತ್ರಿಕೆಯನ್ನು ತಮಿಳಿನಲ್ಲಿ ಮುದ್ರಿಸುವ ಮೂಲಕ ಘೋರ ಅಪಚಾರ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಬೇಡಿಕೆಗಳು ಈಡೇರುವವರೆಗೂ ಯಾವುದೇ ಕಾರಣಕ್ಕೂ ನಗರದಲ್ಲಿ ಪ್ರತಿಮೆ ಅನಾವರಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ನಾರಾಯಣ ಗೌಡ ಈ ಸಂದರ್ಭದಲ್ಲಿ ಎಚ್ಚರಿಸಿದರು.