ತಿರುವಳ್ಳುವರ್ ಪ್ರತಿಮೆ ಅನಾವರಣ ಮಾಡದಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಕನ್ನಡಪರ ಸಂಘಟನೆಗಳು ಮುಖಭಂಗ ಅನುಭವಿಸುವಂತಾಗಿದೆ. ಆದರೂ ಪಟ್ಟು ಬಿಡದ ಕನ್ನಡಪರ ಸಂಘಟನೆಗಳು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ವಾಟಾಳ್ ನಾಗರಾಜ್ ಹೇಳಿದರು.
ತಿರುವಳ್ಳುವರ್ ಪ್ರತಿಮೆ ಅನಾವರಣ ವಿರೋಧಿಸಿ ಕನ್ನಡ ಸಂಘಟನೆಗಳು ಶುಕ್ರವಾರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಮನವಿ ಸಲ್ಲಿಸಿದವು.
ಆಹ್ವಾನ ಪತ್ರಿಕೆಯನ್ನೂ ತಮಿಳಿನಲ್ಲಿಯೇ ಮುದ್ರಿಸಿರುವುದನ್ನು ತೀವ್ರವಾಗಿ ಆಕ್ಷೇಪಿಸಿರುವ ಕರವೇ ಅಧ್ಯಕ್ಷ ನಾರಾಯಣ ಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಯಾವೂರ ಸೀಮೆ ಕರ್ನಾಟಕದ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಬೆಳಿಗ್ಗೆ ಗಡಿರಕ್ಷಣಾ ವೇದಿಕೆಯ ವಾಟಾಳ್ ನಾಗರಾಜ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ಸಾವಿರಾರು ಕಾರ್ಯಕರ್ತರು ಕೆಂಪೇಗೌಡ ವೃತ್ತದಿಂದ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಿರುವಳ್ಳುವರ್ ಪ್ರತಿಮೆ ಅನಾವರಣ ತಡೆಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ವಾಟಾಳ್ ದೂರಿದರು. ಅಲ್ಲದೇ ಆಗಸ್ಟ್ 9ರ ಬೆಂಗಳೂರು ಬಂದ್ ತಡೆಯಲು ಯಾರಿಂದರೂ ತಡೆಯಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದರು.