ರಾಜ್ಯವು ಹಿಂದೆಂದೂ ಕಂಡುಕೇಳರಿಯದ ಮಾದರಿಯಲ್ಲಿ ಬಂದೆರಗಿದ ಪ್ರವಾಹದಿಂದಾಗಿ ತತ್ತರಿಸಿ ಹೋಗಿರುವ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಪರಿಹಾರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಜನಸಾಮಾನ್ಯರಿಗೆ ಯಾವುದೇ ಹೊರೆಯಾಗದಂತೆ ಕೆಲವು ಹೊಸ ತೆರಿಗೆಗಳನ್ನು ಜಾರಿಗೊಳಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಕನಿಷ್ಠ 1,500 ಕೋಟಿ ರೂಪಾಯಿ ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಭಾನುವಾರ ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ನಡೆಸಿದ ವೇಳೆ ಅವರು ಈ ವಿಚಾರ ತಿಳಿಸಿದ್ದಾರೆ.
"ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಉದ್ಭವಿಸಿದರೆ ಸಾಲ ಎತ್ತಲೂ ಸಿದ್ಧ. ಜನತೆ ಸಂಕಷ್ಟದಲ್ಲಿರುವಾಗ ಸಾಲ ಎತ್ತದಿದ್ದರೆ ಇನ್ನು ಯಾವಾಗ ಪಡೆಯಬೇಕು. ಜನರ ಒಳಿತಿಗಾಗಿ ಎಂತಹ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೂ ಸಿದ್ಧ" ಎಂದು ಅವರು ಘೋಷಿಸಿದರು.
ನೆರೆಪೀಡಿತ ಪ್ರದೇಶಗಳಲ್ಲಿ ಒಂದು ವಾರ ಕಾಲ ವಾಸ್ತವ್ಯ ಹೂಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳು ಅಲ್ಲಿಯೇ ಇದ್ದು ಪರಿಹಾರ ಕಾರ್ಯಗಳ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಚಿವರು ಕೂಡಾ ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಮತ್ತು ಕೆಲವು ದಿನಗಳ ಕಾಲ ಬೆಂಗಳೂರಿನತ್ತ ಕಾಲಿಡಬಾರದು ಎಂಬುದಾಗಿ ಅವರು ಸೂಚಿಸಿದ್ದಾರೆ.
ಸರ್ಕಾರಿ ಅಧಿಕಾರಿಗಳ ಕಾರ್ಯದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಯಡಿಯೂರಪ್ಪ, ಸರ್ಕಾರದ ಬಹುತೇಕ ಅಧಿಕಾರಿಗಳು ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ಇನ್ನೂ ಕೆಲವರು ಹಗಲಿರುಳು ಪ್ರವಾಹ ಸಂತ್ರಸ್ತರ ಸಮಸ್ಯೆ ಪರಿಹಾರದಲ್ಲಿ ತೊಡಗಿದ್ದಾರೆ. ಅವರಾಗಿಯೇ ತಮ್ಮ ವೇತನವನ್ನೂ ಪರಿಹಾರ ನಿಧಿಗೆ ಅರ್ಪಿಸಿದ್ದಾರೆ. ರಜಾ ದಿನಗಳಲ್ಲೂ ಕೆಲಸ ಮಾಡುವ ನಿರ್ಧಾರ ಕೈಗೊಂಡಿದ್ದಾರೆ ಎಂದು ನುಡಿದರು.