ನೆರೆ ಹಾವಳಿ ಹಿನ್ನೆಲೆಯಲ್ಲಿ ಹೊಸತೆರಿಗೆಯನ್ನು ಹೇರುವುದು ನಿರ್ಧರಿತ ಎಂದು ಹೇಳಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಈ ಕುರಿತು ದೀಪಾವಳಿ ನಂತರ ಖಚಿತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಚಿವರು ಮತ್ತು ಅಧಿಕಾರಿಗಳ ಸಭೆ ನಂತರ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು ಯಾವುದರ ಮೇಲೆ ಎಷ್ಟು ತೆರಿಗೆ ವಿಧಿಸಬೇಕು ಎಂಬುದು ಇನ್ನಷ್ಟೆ ನಿರ್ಧರಿತವಾಗಬೇಕಿದೆ ಎಂದೂ ತಿಳಿಸಿದ್ದಾರೆ. "ನೆರೆ ಹಿನ್ನೆಲೆಯಲ್ಲಿ ತೆರಿಗೆ ಹಾಕಬೇಕಾಗಿದೆ. ಆದರೆ, ಹೇಗೆ ಮತ್ತು ಯಾವುದರ ಮೇಲೆ ಹಾಕಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ಜನ ಕೂಡ ದೀಪಾವಳಿಯನ್ನು ನೆಮ್ಮದಿಯಿಂದ ಆಚರಿಸಲಿ. ಆ ನಂತರ ನಿರ್ಧರಿಸೋಣ"ಎಂದು ಹೇಳಿದರು.
ಹೆಚ್ಚುವರಿ ತೆರಿಗೆ ಮೂಲಗಳಿಂದಲೇ ಸುಮಾರು 2000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹಮ್ಮಿಕೊಂಡಿರುವುದಾಗಿ ಹೇಳಿದ ಅವರು ಶ್ರೀಸಾಮಾನ್ಯನಿಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ಹಾಕುವುದು ಅತ್ಯವಶ್ಯವೆಂದು ತಿಳಿಸಿದರು. " ಈ ಹಿಂದೆ ಐದು ಬಜೆಟ್ ಮಂಡಿಸಿರುವ ತಾನು ಇದುವರೆಗೂ ಒಂದೇ ಒಂದು ರೂಪಾಯಿ ಕೂಡ ತೆರಿಗೆ ಹಾಕಿಲ್ಲ. ಆದರೆ, ಇವತ್ತು ಸಂಕಷ್ಟ ಪರಿಸ್ಥಿತಿ ಇದ್ದು, ಐದು ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿವೆ. ಅವರೆಲ್ಲರಿಗೂ ಮನೆ ನೀಡಬೇಕಾದರೆ ಈ ತೀರ್ಮಾನ ಅನಿವಾರ್ಯ" ಎದು ಹಣಕಾಸು ಖಾತೆಯನ್ನೂ ಹೊಂದಿರುವ ಯಡಿಯೂರಪ್ಪ ಹೇಳಿದ್ದಾರೆ.
ತೆರಿಗೆ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ. ಕಳೆದ ವರ್ಷದ ಜುಲೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿದಾಗ ಬೆಲೆಯನ್ನು ರಾಜ್ಯ ಸರ್ಕಾರ ಸ್ವಲ್ಪ ಕಡಿಮೆ ಮಾಡಿತ್ತು. ಆ ಸಂದರ್ಭದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ 1.35 ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 68 ಪೈಸೆ ಕಡಿಮೆ ಮಾಡಲಾಗಿತ್ತು. ಇದನ್ನು ಈಗ ಹಿಂತೆಯಲು ನಿರ್ಧರಿಸಿದ್ದು, ಇದರಿಂದಾಗಿ, ಪ್ರತಿ ತಿಂಗಳೂ ರೂ 25ರಿಂದ 30 ಕೋಟಿ ಹೆಚ್ಚುವರಿ ಆದಾಯ ಸರ್ಕಾರಕ್ಕೆ ಬರಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಮದ್ಯ, ಗುಟ್ಕಾ, ಸಿಗರೇಟ್, ಚಿನ್ನ, ಬೆಳ್ಳಿ ಸೇರಿದಂತೆ ಇತರ ಕೆಲ ಐಷಾರಾಮಿ ವಸ್ತುಗಳ ಮೇಲೆ ತೆರಿಗೆ ವಿಧಿಸಲು ಚಿಂತಿಸಲಾಗಿದೆ. ವಿಲಾಸಿ ತೆರಿಗೆ ಹೆಚ್ಚಿಸುವ ಬಗ್ಗೆ ಮತ್ತು ವ್ಯಾಟ್ ಅನ್ನು ಕನಿಷ್ಠ ಶೇ 0.5ರಷ್ಟು ಹೆಚ್ಚು ವಿಧಿಸುವ ಕುರಿತೂ ಚಿಂತನೆ ನಡೆದಿದೆ ಎನ್ನಲಾಗಿದೆ.