ನೆರೆಪೀಡೆಯಿಂದಾಗಿ ಮನೆಮಠ ಕಳೆದುಕೊಂಡವರಿಗೆ, ಮನೆ ಕಟ್ಟಿಕೊಳ್ಳಲು ಶೇ.4ರ ದರದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕುಗಳು ನಿರ್ಧರಿಸಿವೆ. ಬೆಂಗಳೂರಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಂತ್ರಸ್ತರಿಗೆ ನೀಡುವ ಈ ಸಾಲವನ್ನು ಒಂದು ವರ್ಷದ ವರೆಗೆ ವಸೂಲು ಮಾಡದಿರಲು ನಿರ್ಧರಿಸಲಾಗಿದೆ. ಇದಲ್ಲದೆ ಇದೀಗಾಗಲೇ ಪಡೆದಿರುವ ಹಾಲಿ ಸಾಲವನ್ನೂ ಒಂದು ವರ್ಷದ ತನಕ ವಸೂಲಿ ಮಾಡದಿರಲೂ ನಿರ್ಧರಿಸಲಾಗಿದೆ. ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಗೆ ಹಾಗೂ ಮಧ್ಯಮಾವಧಿ ಸಾಲವನ್ನು ದೀರ್ಘಾವಧಿಗೆ ಪರಿವರ್ತಿಸಲೂ ಸಹ ಸಮಿತಿ ನಿರ್ಧರಿಸಿದೆ. ಇದೀಗಾಗಲೇ ಸಾಲ ಹೊಂಡಿರುವವರೂ ಸಹ ಹೊಸದಾಗಿ ಕೃಷಿಸಾಲ ನೀಡಲು ಆಸ್ಪದ ನೀಡಲಾಗಿದೆ.
ಸರ್ಕಾರದಿಂದ ಬಂದಿರುವ ಸಣ್ಣ ಮೊತ್ತದ ಪರಿಹಾರ ಚೆಕ್‌ಗಳನ್ನು ಕ್ಷಿಪ್ರವಾಗಿ ನಗದೀಕರಿಸುವುದು, ಸಂತ್ರಸ್ತರಿಗೆ ಖಾತೆ ಇಲ್ಲದಿದ್ದರೂ, ಅಥವಾ ಇದ್ದ ಖಾತೆಯಲ್ಲಿ ಹಣವಿಲ್ಲದಿದ್ದರೂ ಚೆಕ್ ಸ್ವೀಕರಿಸಿ ನಗದು ನೀಡಲು ಹಾಗೂ ಸಂತ್ರಸ್ತರಿಗೆ ಅನುಕೂಲವಾಗುವಂತೆ ಅಲ್ಲಲ್ಲಿ ಸಾಲ ಶಿಬಿರಗಳನ್ನು ಆರಂಭಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬೆಳೆಸಾಲ ಮನ್ನಾ ಸಾಧ್ಯವಿಲ್ಲ ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಹ ಸಂತ್ರಸ್ತರ ಬೆಳೆಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸಂತ್ರಸ್ತರ ತುರ್ತು ಅಗತ್ಯಗಳನ್ನು ಪೂರೈಸಲು ಸರ್ಕಾರ ಬದ್ಧವಾಗಿದ್ದು ಇದಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇತರ ಬೇಡಿಕೆಗಳನ್ನು ಹಂತಹಂತವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
"ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ಮನೆಗಳ ನಿರ್ಮಾಣ ಹಾಗೂ ಬೆಳೆ ನಾಶಕ್ಕೆ ಪರಿಹಾರ ಒದಗಿಸುವುದು ಇದೀಗ ಸರ್ಕಾರದ ಮುಂದಿರುವ ಅತ್ಯವಶ್ಯ ಕಾರ್ಯಗಳಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ರೈತರ ಬೆಳೆ ಸಾಲಮನ್ನಾ ಕಷ್ಟಕರ. ಸಾಲಮನ್ನಾ ಮಾಡಲು ಸರ್ಕಾರದ ಬಳಿ ಹಣವಿರಬೇಕಲ್ಲಾ" ಎಂದು ಬ್ಯಾಂಕರ್‌ಗಳ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ನುಡಿದರು.