ಕಳೆದ ವರ್ಷ ರಾಜ್ಯ ಸರಕಾರವು ಗುಲ್ಬರ್ಗದಲ್ಲಿ ನಡೆಸಿದ ಸಂಪುಟ ಸಭೆಗೆ ವ್ಯಯಿಸಿದ ವೆಚ್ಚವೆಷ್ಟು? ಕೇಳಿದರೆ ಆಘಾತವಾದೀತು. ತೆರಿಗೆದಾರರು ಸರಕಾರಕ್ಕೆ ಒಪ್ಪಿಸಿದ ಹಣದಲ್ಲಿ ಅಂದಾಜು ಒಂದು ಕೋಟಿ ರೂಪಾಯಿ!
ಹೌದು, ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಆರ್‌ಟಿಐ (ಮಾಹಿತಿ ಹಕ್ಕು ಕಾಯಿದೆ) ಅರ್ಜಿಯೊಂದರ ಅನುಸಾರ, ಸರಕಾರವೇ ಇದನ್ನು ಒಪ್ಪಿಕೊಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಗುಲ್ಬರ್ಗದಲ್ಲಿರುವ ವಿಕಾಸ ಸೌಧದ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಗೃಹದಲ್ಲಿ ಕರ್ನಾಟಕ ಸರಕಾರ ಸಂಪುಟ ಸಭೆ ನಡೆಸಿತ್ತು. ಅರ್ಧ ದಿನದ ಈ ಸಭೆಗೆ ವ್ಯಯವಾದ ಒಟ್ಟು ಹಣ 92.39 ಲಕ್ಷ ರೂಪಾಯಿ. ಈ ಸಭೆಗಾಗಿ ಅಲಂಕಾರಕ್ಕಾಗಿಯೇ ವ್ಯಯಿಸಿದ ಮೊತ್ತ 8.14 ಲಕ್ಷ ರೂಪಾಯಿ!
ವಿಕಾಸ ಸೌಧಕ್ಕೆ ಸುಣ್ಣ ಬಣ್ಣ, ಸರಕಾರಿ ಅತಿಥಿ ಗೃಹದಿಂದ ವಿಕಾಸ ಸೌಧಕ್ಕೆ ತೆರಳುವ ರಸ್ತೆ ದುರಸ್ತಿ ಮತ್ತಿತರ ಕಾರ್ಯಗಳಿಗೆ 41.30 ಲಕ್ಷ ರೂಪಾಯಿ ವ್ಯಯಿಸಲಾಗಿದೆ. ಅಂತೆಯೇ ಅತಿಥಿ ಗೃಹದ ದುರಸ್ತಿ/ಅಲಂಕಾರಕ್ಕೆ 14.25 ಲಕ್ಷ ರೂ. ವ್ಯಯವಾಗಿದೆ.
ಬೆಂಗಳೂರಿನಿಂದ ಬಂದಿರುವ ಸಚಿವರು ಮತ್ತು ಅಧಿಕಾರಿಗಳ ಆಹಾರ ಮತ್ತು ವಸತಿ ವ್ಯವಸ್ಥೆಗಾಗಿ ವ್ಯಯಿಸಿದ ಮೊತ್ತ 3.89 ಲಕ್ಷ ರೂಪಾಯಿ ಆಗಿದ್ದರೆ, ಅವರ ಸಾರಿಗೆ ವ್ಯವಸ್ಥೆಗಾಗಿ 4.81 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.
ಆದರೆ ಸಭೆ ಮುಗಿಸಿದ ಬಳಿಕ ಯಾವುದೇ ಸಚಿವರು, ಅಧಿಕಾರಿಗಳು ಗುಲ್ಬರ್ಗಾದಲ್ಲೇ ಉಳಿದುಕೊಂಡಿಲ್ಲ. ತಕ್ಷಣವೇ ಬೆಂಗಳೂರಿಗೆ ಮರಳಿದ್ದರು. ಹೀಗಾಗಿ ಅವರ ಪಂಚತಾರಾ ಹೋಟೆಲ್ ಬಿಲ್ ಸರಕಾರದ ಖಜಾನೆಗೆ ಉಳಿತಾಯವೇ.