ಕೇರಳದಿಂದ ಕೇಳಿ ಬಂದಿರುವ ಭಯೋತ್ಪಾದಕರ 'ಲವ್ ಜಿಹಾದ್' ಕರ್ನಾಟಕಕ್ಕೂ ವ್ಯಾಪಿಸಿದೆಯೇ? ಹೊಸನಮೂನೆಯ ಉಗ್ರವಾದಿಗಳ ಈ ಕೃತ್ಯ ರಾಜ್ಯದಲ್ಲೂ ಸಕ್ರಿಯವಾಗಿದೆ ಎಂದು ಆಪಾದಿಸಿರುವ ಸಂಘಟನೆಯೊಂದು, ಉಗ್ರರ ಈಕಾರ್ಯಾಚರಣೆ ಆರಂಭವಾಗಿರುವ ಬಳಿಕ ದಕ್ಷಿಣ ಕನ್ನಡ ಒಂದರಲ್ಲೇ ಸುಮಾರು ಮೂರು ಸಾವಿರ ಹಾಗೂ ರಾಜ್ಯದ ಇತರೆಡೆಗಳಲ್ಲಿ 30 ಸಾವಿರ ಹಿಂದೂ ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂದು ದೂರಿದೆ.
ಈ ಕುಕೃತ್ಯ ಎಸಗುವವರ ವಿರದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಂಘಟನೆಯು ಗುರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಲವ್ ಜಿಹಾದ್ ಎಂಬ ಈ ಕೃತ್ಯವನ್ನು ಹೇಗೆ ನಡೆಸಲಾಗುತ್ತದೆ ಎಂಬ ನಿಖರ ಪ್ರಶ್ನೆಗೆ ಉತ್ತರಿಸಿದ ಸಂಘಟನೆಯ ಸಂಚಾಲಕಿ ಲಕ್ಷ್ಮಿ ಪೈ ಅವರು, ಹಿಂದೂ ಹುಡುಗಿಯರ ಬಳಿ ಪ್ರೀತಿಯ ನಾಟಕವಾಡಿ ಅವರನ್ನು ಬಳಿಕ ಇನ್ನೊಂದು ಧರ್ಮಕ್ಕೆ ಮತಾಂತರಗೊಳಿಸಲಾಗುತ್ತದೆ. ಇವರ ಮನಒಲಿಸಿ ಜಿಹಾದ್ ಅನ್ನು ಇವರ ತಲೆಗೆ ತುಂಬಿ ನಂತರ ಇವರನ್ನು ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಬಳಸಿಕೊಳ್ಳಲಾಗುತ್ತದೆ ಎಂಬುದಾಗಿ ಹೇಳಿದ್ದಾರೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಐಜಿಪಿ(ಪಶ್ಚಿಮ ವಲಯ) ಗೋಪಾಲ ಬಿ. ಹೊಸೂರ್ ಅವರು ಈ ಆರೋಪದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. "ಇಂತಹ ಯಾವುದೇ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿಲ್ಲ. ಇದುವರೆಗೆ ಯಾವುದೇ ದೂರು ಸ್ವೀಕರಿಸಿಲ್ಲ" ಎಂದು ಅವರು ಹೇಳಿದ್ದಾರೆ.
ಇಂತಹ ಆಪಾದನೆಗಳು ನಿಜವೇ ಆಗಿದ್ದರೆ, ಬಲಿಪಶುಗಳು ಪೊಲೀಸರನ್ನು ಸಂಪರ್ಕಿಸುತ್ತಿದ್ದರು. ಇಂತಹ ಯಾವುದೇ ದೂರು ಬಂದಿಲ್ಲ ಎಂದು ಹೇಳಿರುವ ಅವರು, ಅನ್ಯಧರ್ಮೀಯ ಯುವಕರು ಮಹಿಳೆಯರನ್ನು ಒಲಿಸಿಕೊಳ್ಳುತ್ತಾರೆ ಎಂದಾದರೆ, ಅದು ಅವರ ಸ್ವಂತ ಇಚ್ಚೆಯಾಗಿದ್ದು ಈ ಬಗ್ಗೆ ಪೊಲೀಸರು ಏನೂ ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಅದಾಗ್ಯೂ, ಸಮಿತಿಯ ಈ ಆರೋಪದ ಬಗ್ಗೆ ತನಿಖೆ ನಡೆಸುವುದಾಗಿ ಹೊಸೂರ್ ಹೇಳಿದ್ದಾರೆ.