ಆರ್ಎಸ್ಎಸ್ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ಕಾಂಗ್ರೆಸ್ಸಿಗರ ನಾಲಿಗೆಯಲ್ಲಿ ಹುಳು ಬೀಳುತ್ತದೆ ಎಂದು ರಾಜ್ಯ ಬಿಜೆಪಿ ವಕ್ತಾರ ಹಾಗೂ ಶಾಸಕ ಸಿ.ಟಿ. ರವಿ ಶಾಪ ಹಾಕಿದ್ದಾರೆ.
ನೆರೆ ಸಂತ್ರಸ್ತರಿಗೆ ಆರ್ಎಸ್ಎಸ್ ಮೂಲಕ ದೇಣಿಗೆ ನೀಡುವಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಜಾತಿ ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಅನುಭವ ಕಾಂಗ್ರೆಸ್ಸಿಗರಿಗೆ ಹೆಚ್ಚಾಗಿದೆ. ಪರಿಹಾರ ವಿತರಣೆಯಲ್ಲಿ ರಾಜಕಾರಣ ನಡೆಯುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷರ ಆರೋಪ ಸತ್ಯಕ್ಕೆ ದೂರವಾಗಿದ್ದು ಇದೊಂದು ಕಪೋಲಕಲ್ಪಿತ ಆರೋಪ ಎಂದರು.
ಆರ್ಎಸ್ಎಸ್‌ನವರು ಸಮಾಜ ಸೇವೆಗೆ ತಮ್ಮ ಬದುಕು ಅರ್ಪಿಸಿಕೊಂಡಿದ್ದಾರೆ. ಅಲ್ಲಿಗೆ ಹೋದ ಹಣ ಸದ್ವಿನಿಯೋಗ ಆಗುತ್ತದೆ. ಸರ್ಕಾರದ ಹಣದಲ್ಲಿ ಕೆಲಸ ಮಾಡುವಂಥ ಸ್ಥಿತಿ ಸಂಘಟನೆಗೆ ಬಂದಿಲ್ಲ. ಅದು ಕಾಂಗ್ರೆಸ್‌ನ ಸೇವಾದಳ ಅಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಇದೇವೇಳೆ ಮಂತ್ರಿಗಳು ಕಳೆದ ಒಂದು ವರ್ಷದಲ್ಲಿ ಸಂಪಾದನೆ ಮಾಡಿರುವ ಹಣವೇ ನೆರೆ ಸಂತ್ರಸ್ತರಿಗೆ ಸಾಕು ಎಂದು ಹೇಳಿಕೆ ನೀಡಿರುವ ಜೆಡಿಎಸ್ ನಾಯಕ ಎಚ್.ಎಂ. ರೇವಣ್ಣ ಅವರ ಹೇಳಿಕೆಗೂ ಕಿಡಿಕಾರಿದ ರವಿ, ದೇವೇಗೌಡ ಕುಟುಂಬ ಮಾಡಿರುವ ಸಂಪಾದನೆಯಲ್ಲಿ ನವ ಕರ್ನಾಟಕವನ್ನೇ ನಿರ್ಮಿಸಬಹುದು. ನಾನು ಮಾಡಿದಂತೆ ಇತರರೂ ಮಾಡುತ್ತಾರೆ ಎಂಬ ಭಾವನೆ. ತಾನೂ ಕಳ್ಳ ಪರರನ್ನು ನಂಬ ಎಂಬ ಗಾದೆ ಮಾತಿನಂತಾಗಿದೆ ಎಂದು ಲೇವಡಿ ಮಾಡಿದರು.