ಬಡ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸುಮಾರು 300 ಟನ್ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಈ ಬಗ್ಗೆ ತನಿಖೆ ನಡೆಸಿ ಇಸ್ಕಾನ್ ಸಂಸ್ಥೆ ಮುಖ್ಯಸ್ಥರನ್ನು ಬಂಧಿಸಬೇಕೆಂದು ಧರಣಿ ನಡೆಸಿದ್ದಾರೆ.
ಬಡ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಪ್ರತಿದಿನ ಆಹಾರ ಮತ್ತು ನಾಗರಿಕ ಇಲಾಖೆಯವರು ನೀಡುವ ಅಕ್ಕಿಯನ್ನು ಅರ್ಧದಷ್ಟು ಮಾತ್ರವೆ ಬಳಸಿ ಉಳಿದದ್ದನ್ನು ಅಕ್ರಮವಾಗಿ ದಾಸ್ತಾನಿಸಿ ಕೆಜಿಗೆ 15 ರೂ.ಗೆ ಮಾರಾಟ ಮಾಡುತ್ತಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಪತ್ತೆ ಹಚ್ಚಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಮಧು ಪಂಡಿತ್ ದಾಸ್ ಮತ್ತು ಚಂಚಲಪತಿದಾಸ್ ಅವರನ್ನು ಕೂಡಲೇ ಬಂಧಿಸಬೇಕೆಂದು ಶಿವಕುಮಾರ್ ಆಗ್ರಹಿಸಿದ್ದಾರೆ.
ಸಂತ್ರಸ್ತರ ಪರಿಹಾರಕ್ಕಾಗಿ ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಮುಖಂಡರು ಅಕ್ಕಿ ಖರೀದಿಗೆ ಹುಡುಕಾಟ ನಡೆಸುತ್ತಿದ್ದಾಗ ಈ ಅಕ್ರಮ ಬಯಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ಇಲಾಖೆ ಆಯುಕ್ತ ಮದನ್ ಗೋಪಾಲ್ ದಾಳಿ ಮಾಡಿ ಅಕ್ಕಿ ವಶಪಡಿಸಿಕೊಂಡು ಕಲ್ಯಾಣ ಮಂಟಪಕ್ಕೆ ಬೀಗ ಜಡಿದಿದ್ದಾರೆ ಎಂದು ಅವರು ತಿಳಿಸಿದ್ದಾರೆ.