ಅಫ್ಜಲಪುರ ತಾಲ್ಲೂಕಿನ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ತರಾದ ಜನಸಾಮಾನ್ಯರಿಗೆ ಸಹಾಯಹಸ್ತ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ದೇಸಾಯಿ ಕಲ್ಲೂರ ಗ್ರಾಮಪಂಚಾಯಿತಿಗೆ 1 ಕೋಟಿ ರೂ. ಪರಿಹಾರದ ಹಣವನ್ನು ನೀಡಲಾಗಿದೆ.
ಈ ಕುರಿತು ದೇಸಾಯಿ ಕಲ್ಲೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ವಿಠ್ಠಲ ಜಮಾದಾರ ಅವರು ಮಾಹಿತಿಯನ್ನು ನೀಡುತ್ತಾ, ಮಳೆಯಿಂದ ನೆಲೆಯನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ಸಹಾಯಹಸ್ತ ನೀಡಿದ್ದು, ಸಂತ್ರಸ್ತರನ್ನು ಖುದ್ದಾಗಿ ಭೇಟಿಮಾಡಿ ಆಹಾರಧಾನ್ಯ ಹಾಗೂ ಅಗತ್ಯವಸ್ತುಗಳನ್ನು ವಿತರಿಸಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಪೂರ್ತಿ ಬಿದ್ದ ಮನೆಗೆ ಸರ್ಕಾರದ ವತಿಯಿಂದ ಕೇವಲ 10 ಸಾವಿರ ರೂ.ಗಳ ಪರಿಹಾರವನ್ನು ಘೋಷಿಸಲಾಗಿತ್ತು. ಆದರೆ ಶಾಸಕರ ಮುತುವರ್ಜಿಯ ಕಾರಣದಿಂದಾಗಿ ಈ ಪರಿಹಾರ ಧನದ ಪ್ರಮಾಣ 35 ಸಾವಿರಕ್ಕೆ ಏರಿಸಲಾಗಿದೆ ಎಂದು ವಿಠ್ಠಲ ಜಮಾದಾರ ಇದೇ ಸಂದರ್ಭದಲ್ಲಿ ತಿಳಿಸಿ, ಧೈರ್ಯಗೆಡದಂತೆ ಜನರಿಗೆ ಸಾಂತ್ವನ ಹೇಳಿದರು.
ಪರಿಹಾರ ಕಾರ್ಯ ಇಷ್ಟಕ್ಕೇ ಸೀಮಿತವಾಗಿಲ್ಲ. ಶೀಘ್ರದಲ್ಲಿಯೇ ಬೆಳೆಹಾನಿಯ ಪರಿಹಾರ ಧನ ದೊರೆಯಲಿದೆ ಎಂದು ಸಂತ್ರಸ್ತರಿಗೆ ಭರವಸೆ ಅವರು ನೀಡಿದರು. ಸವರ ಶರಣಪ್ಪ, ಚಂದ್ರಕಾಂತ ಬೈಲೂರ, ಸಿದ್ದಪ್ಪಾ ಹುಡೇದ ಇವರೇ ಮೊದಲಾದ ನಾಯಕರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.