ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಾಂಗ್ರೆಸ್-ಜೆಡಿಎಸ್ ಇಲ್ಲದ 'ಸರ್ವ'ಪಕ್ಷ ನಿಯೋಗ! (Congress | JDS | Karnataka BJP Government | Central Flood Relief | CM Yaddiyurappa)
ನೆರೆ ಹಾವಳಿಯಿಂದ ಸಂತ್ರಸ್ತರಿಗೆ ಪರಿಹಾರ ದೊರೆಯುವಂತಾಗಲು ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವು ದೊರಕಿಸಿಕೊಡಲು ಮತ್ತು ಇದನ್ನು ರಾಷ್ಟ್ರೀಯ ವಿಕೋಪ ಎಂದು ಘೋಷಿಸುವಂತೆ ಪ್ರಧಾನಮಂತ್ರಿ ಬಳಿಗೆ ಮಂಗಳವಾರ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಯತ್ನಕ್ಕೆ ರಾಜಕೀಯ ಕಾರ್ಮೋಡ ಕವಿದಿದ್ದು, ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಕೂಡ ನಾವು ಬರಲ್ಲ ಎಂದು ಕೈ ಎತ್ತಿವೆ.
ಇದರೊಂದಿಗೆ, ಕರ್ನಾಟಕದಲ್ಲಿ ಪರಿಹಾರ ವಿತರಣೆಗೆ ಸಂಬಂಧಿಸಿದ ರಾಜಕೀಯವು ಮತ್ತೊಂದು ಕೆಟ್ಟ ತಿರುವು ಪಡೆದುಕೊಂಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸಿಗರಾದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕ ವಿ.ಎಸ್.ಉಗ್ರಪ್ಪ, ಮುಖ್ಯಮಂತ್ರಿಗಳು ನಮಗೆ ಸೂಕ್ತ ಮಾಹಿತಿ ನೀಡಿಲ್ಲ ಎಂದು ಯಡಿಯೂರಪ್ಪ ಸರಕಾರದ ನಿಲುವಿಗೆ ಬೇಸರ ವ್ಯಕ್ತಪಡಿಸಿ, ಕಾಂಗ್ರೆಸ್ ಈ ನಿಯೋಗದ ಜೊತೆ ತೆರಳುವುದಿಲ್ಲ ಎಂದು ಘೋಷಿಸಿದ್ದಾರೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಈಗಾಗಲೇ ಬಂದು ನೋಡಿ ಹೋಗಿದ್ದಾರೆ. 500 ಕೋಟಿ ರೂ. ತಕ್ಷಣದ ಪರಿಹಾರ ಘೋಷಿಸಿದ್ದಾರೆ. ಅದೇ ರೀತಿ ಸೋನಿಯಾ ಗಾಂಧಿ ಕೂಡ ಬಂದು ಹೋಗಿದ್ದಾರೆ. ಹೀಗಿರುವಾಗ ಮತ್ತೆ ಕೇಂದ್ರದ ಬಳಿಗೆ ನಿಯೋಗ ಕೊಂಡೊಯ್ಯುವುದು ಸರಿಯಲ್ಲ ಎಂಬುದು ಇವರ ವಾದ.
ಇದಕ್ಕೆ ಮೊದಲು, ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಕೂಡ ಬೆಳಿಗ್ಗೆ ಪತ್ರಿಕಾಗೋಷ್ಠಿ ಕರೆದು, ಮುಖ್ಯಮಂತ್ರಿಗಳು ನಮಗೆ ಸಮರ್ಪಕ ಮಾಹಿತಿ ನೀಡಿಲ್ಲ, ಇದಕ್ಕಾಗಿ ನಾವು ಬರುವುದಿಲ್ಲ ಎಂದು ಘೋಷಿಸಿದ್ದರು.
ಬುಧವಾರ ಕೇಂದ್ರದ ನೆರೆ ಅಧ್ಯಯನ ತಂಡವು ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರು ಮಂಗಳವಾರವೇ ನಿಯೋಗ ಕೊಂಡೊಯ್ಯುತ್ತಿದ್ದಾರೆ.