ಅಪಹರಣದ ನಾಟಕವನ್ನಾಡುವ ಮೂಲಕ ಮಾಧ್ಯಮಗಳಲ್ಲಿ ತಮ್ಮ ಹೆಸರು ಕಾಣಿಸಿಕೊಳ್ಳುವಂತೆ ಸಂಚುರೂಪಿಸಿ, ಮಿಂಚಲು ಹೊರಟಿದ್ದ ಇಬ್ಬರು ಯುವಕರೀಗ ಪೊಲೀಸರ ಆತಿಥ್ಯ ಸ್ವೀಕರಿಸಿ ಕಂಬಿ ಎಣಿಸುತ್ತಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ತುಮಕೂರಿನ ಸರಸ್ವತಿಪುರಂ ಬಡಾವಣೆಯ ನಿವಾಸಿಗಳಾದ ಚೇತನ್ ಹಾಗೂ ಅರವಿಂದ್ ಎಂಬುವವರೇ ಆ ಕಿಡಿಗೇಡಿಗಳಾಗಿದ್ದು, ತಾವು ಕ್ಯಾತ್ಸಂದ್ರ ಕಡೆಯಿಂದ ಬರುತ್ತಿದ್ದಾಗ ಟಾಟಾ ಸುಮೋದಲ್ಲಿ ಬಂದ ದುಷ್ಕರ್ಮಿಗಳು ಅರವಿಂದನನ್ನು ಅಪಹರಿಸಿದರು ಎಂದು ಕ್ಯಾತ್ಸಂದ್ರ ಪೊಲೀಸರಿಗೆ ದೂರುನೀಡಿದ ಚೇತನ್ ನಂತರ ಕಾಣೆಯಾಗಿದ್ದ.
ಈ ಕುರಿತು ಬಲೆಬೀಸಿ ಇಬ್ಬರನ್ನು ಬಂಧಿಸಿದ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ವಿಚಾರಣೆ ನಡೆಸಿದಾಗ ವಿವರ ಬಯಲಿಗೆ ಬಂತು. ಈ ಕಿಡಿಗೇಡಿಗಳಿಬ್ಬರೂ ಒಂದೇ ಬೈಕ್‌ನಲ್ಲಿ ಕುಳಿತು 25 ಸಾವಿರ ನಗದು ಇಟ್ಟುಕೊಂಡು ಬೈಕ್ ಕೊಳ್ಳಲು ಹೋಗುತ್ತಿದ್ದಾಗ, ಹಿಂಬದಿಯಲ್ಲಿ ಕುಳಿತಿದ್ದ ಅರವಿಂದನನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಆದರೆ ಇದಾದ ಮೂರು ಗಂಟೆಯ ನಂತರ ಚೇತನ್‌ಗೆ ಕರೆಮಾಡಿದ ಅರವಿಂದ್ ತಾನು ಕ್ಷೇಮದಿಂದಿರುವ ವಿಷಯ ತಿಳಿಸಿದ್ದರೂ, ಅದನ್ನು ಪೊಲೀಸರ ಗಮನಕ್ಕೆ ತಾರದ ಚೇತನ್ ತಲೆಮರೆಸಿಕೊಂಡಿದ್ದ ಎಂದು ಸುದ್ದಿಮೂಲಗಳು ತಿಳಿಸಿವೆ.
ಆದರೆ, ಹೊಸಪೇಟೆಯ ಡಾಬಾವೊಂದರಲ್ಲಿ ದುಷ್ಕರ್ಮಿಗಳ ಹಿಡಿತದಿಂದ ತಪ್ಪಿಸಿಕೊಂಡ ಅರವಿಂದ್ ಕೂಡಲಸಂಗಮದ ಮೂಲಕ ತುಮಕೂರು ಸೇರಿದಾಗ, ಪೊಲೀಸರು ಅವನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಅವನ ನೀಡಿದ ಹೇಳಿಕೆಗಳು ಈ ಹಿಂದೆ ಚೇತನ್ ನೀಡಿದ ಹೇಳಿಕೆಗಳಿಗೆ ತಾಳೆಯಾಗಲಿಲ್ಲವಾದ್ದರಿಂದ, ಅವರಿಬ್ಬರನ್ನೂ ಬಂಧಿಸಿ ವಿಚಾರಣೆಯನ್ನು ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.