ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವೀಡಿಯೋ ಕಾನ್ಫರೆನ್ಸ್‌ನಲ್ಲಿ ಸಿಎಂ ಕಾಲಹರಣ: ಎಚ್‌ಡಿಕೆ (HD Kumaraswamy | Karnataka | JDS | Yediyurappa)
Feedback Print Bookmark and Share
 
ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರದ ಪರಿಹಾರ ಕುರಿತು ರಾಜ್ಯ ಸರಕಾರ ಮತ್ತು ಕಾಂಗ್ರೆಸ್‌ಗಳು ಜನರಲ್ಲಿ ಗೊಂದಲ ಮೂಡಿಸುತ್ತಿವೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಸಂತೈಸುವ ಬದಲು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಯಾರೋ ಮಾಡಿದ ಕೆಲಸವನ್ನು ತನ್ನ ಕೆಲಸವೆಂದು ಹೇಳಿಕೊಳ್ಳುತ್ತಾ ರಾಜಕೀಯ ಮಾಡುತ್ತಿರುವ ಮುಖ್ಯಮಂತ್ರಿಯವರದ್ದು ಸಣ್ಣತನದ ರಾಜಕೀಯ ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ಕೊಂಗವಾಡ ಗ್ರಾಮ ಸ್ಥಳಾಂತರಕ್ಕೆ ತರಾತುರಿಯ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ರಾಜಕೀಯ ಲಾಭಕ್ಕೆ ಯತ್ನಿಸುತ್ತಿದ್ದಾರೆ ಎಂದರು.

ಅದು ಸರಕಾರದ್ದಲ್ಲ...
ಕೊಂಗವಾಡ ಗ್ರಾಮ ನಿರ್ಮಾಣ ಮಾಡುತ್ತಿರುವುದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು. ಆದರೆ ಅದನ್ನು ಸರಕಾರ ಮಾಡುತ್ತಿದೆ ಎಂದು ಯಡಿಯೂರಪ್ಪ ಹೇಳಿಕೊಳ್ಳುತ್ತಿದ್ದಾರೆ. ಸರಕಾರವೇ ಮನೆ ಕಟ್ಟಿಸುತ್ತಿದೆ ಎನ್ನುವ ಅವರ ಮಾತು ಸಂಪೂರ್ಣ ಸುಳ್ಳು ಎಂದರು.

ಅಲ್ಲದೆ ಕೊಂಗವಾಡ ಗ್ರಾಮದ ಸ್ಥಳಾಂತರ ಪ್ರಕ್ರಿಯೆಗೆ ತಾನು ಮುಖ್ಯಮಂತ್ರಿಯಾಗಿದ್ದಾಗಲೇ ಚಾಲನೆ ನೀಡಲಾಗಿತ್ತು. ಅಲ್ಲಿ ಮತ್ತೆ ರಾಜಕೀಯ ಲಾಭದ ಕುರಿತು ಯಡಿಯೂರಪ್ಪ ಯೋಚಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಆರೋಪಿಸಿದರು.

ಕೆಲಸ ಮಾಡಿ...
ಯಡಿಯೂರಪ್ಪನವರು ಸಮಯ ಮತ್ತು ಹಣವನ್ನು ವೃಥಾ ವ್ಯರ್ಥ ಮಾಡುವ ಬದಲಿಗೆ ಸಮರ್ಪಕವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದ ಎಚ್‌ಡಿಕೆ, ಜನರಲ್ಲಿ ಗೊಂದಲ ಮೂಡಿಸುವ ಕಾರ್ಯವನ್ನು ನಿಲ್ಲಿಸುವಂತೆ ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡುವ ಬದಲು ಅಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾಲಹರಣ ಮಾಡುವುದರಿಂದ ಏನೂ ಸಾಧಿಸಲಾಗದು ಎಂದೂ ಅವರು ಕಟಕಿಯಾಡಿದರು.

ಸರಕಾರ-ಕಾಂಗ್ರೆಸ್ ಗೊಂದಲ..
ಕೇಂದ್ರ ಸರಕಾರದಿಂದ 1,000 ಕೋಟಿ ರೂಪಾಯಿ ಪರಿಹಾರ ಹಣ ಕೈ ಸೇರಿಲ್ಲ ಎಂದು ರಾಜ್ಯ ಸರಕಾರ ಹೇಳುತ್ತಿದ್ದರೆ, ಅತ್ತ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರು ಕೇಂದ್ರ ನೀಡಿರುವ ಹಣದ ಖರ್ಚು-ವೆಚ್ಚ ವಿವರ ನೀಡುತ್ತಿದ್ದಾರೆ. ಜನ ಯಾವುದನ್ನು ನಂಬಬೇಕು? ಈ ರೀತಿಯ ಗೊಂದಲಗಳನ್ನು ಯಾಕೆ ಸೃಷ್ಟಿಸುತ್ತಿದ್ದೀರಿ ಎಂದು ಅವರು ಸರಕಾರ ಮತ್ತು ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ