ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕಲ್ಕಿ ಫೋಟೋದಿಂದ ಸುರಿಯಿತು ಜೇನು ತುಪ್ಪ..! (kalki Bhagavan | Amma bhagavan | India | Karnataka)
Feedback Print Bookmark and Share
 
ದಾವಣಗೆರೆಯ ನಟುವಳ್ಳಿ ಎಂಬಲ್ಲಿನ ಮನೆಯೊಂದರಲ್ಲಿ ಇಟ್ಟಿದ್ದ ಕಲ್ಕಿ ಭಗವಾನ್ ಮತ್ತು ಅಮ್ಮ ಭಗವಾನ್ ಫೋಟೋದಿಂದ ಜೇನು ತುಪ್ಪ ಸುರಿದ ವಿಸ್ಮಯಕಾರಿ ಘಟನೆ ವರದಿಯಾಗಿದ್ದು, ಭಕ್ತರು ಮತ್ತು ಕುತೂಹಲಿ ಜನರು ತಂಡೋಪತಂಡವಾಗಿ ಭೇಟಿ ನೀಡಿದ್ದಾರೆ.

ನಟುವಳ್ಳಿಯ ನಾಗರಾಜಪ್ಪ ಎಂಬುವವರ ಮನೆಯಲ್ಲಿ ಇಡಲಾಗಿದ್ದ ದೊಡ್ಡದಾದ ಕಲ್ಕಿ ಭಗವಾನ್ ಮತ್ತು ಅಮ್ಮ ಭಗವಾನ್‌ರ ಫೋಟೋದಲ್ಲಿ ಇಂದು ಬೆಳಿಗ್ಗೆ 8 ಗಂಟೆಗೆ ಜೇನು ತುಪ್ಪ ಸುರಿಯಲಾರಂಭಿಸಿತ್ತು. ಈ ವಿಸ್ಮಯವನ್ನು ಕಂಡು ದಂಗಾದ ಮನೆಯವರು, ಇದು ಭಕ್ತರನ್ನು ಭಗವಾನ್ ಹರಸಿದ ರೀತಿ ಎಂದು ಸಂತೃಪ್ತರಾಗಿದ್ದರು.

ಸುದ್ದಿ ತಿಳಿದ ಕುತೂಹಲಿ ಜನ ಮನೆಗೆ ದಾಂಗುಡಿಯಿಡಲಾರಂಭಿಸಿದರು. ಮಧ್ಯಾಹ್ನದ ಹೊತ್ತಿಗೆ ಈ ಮನೆಯ ಸುತ್ತ ಜಾತ್ರೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಹೊತ್ತಿಗೆ (ಮಧ್ಯಾಹ್ನ 12.30) ಜೇನುತುಪ್ಪ ಸುರಿಯುವುದು ಕೂಡ ನಿಂತು ಹೋಗಿದೆ ಎಂದು ಮನೆಯ ಯಜಮಾನ ನಾಗರಾಜಪ್ಪ ಹೇಳಿದ್ದಾರೆ.

ಭಕ್ತಿ ಹುಟ್ಟಿದ್ದು ಹೇಗೆ?
ನಾಗರಾಜಪ್ಪನವರ ಅಣ್ಣನ ಮೊಮ್ಮಗಳಿಗೆ ತೀವ್ರ ಅನಾರೋಗ್ಯವಾಗಿದ್ದ ಸಂದರ್ಭದಲ್ಲಿ ಕಲ್ಕಿ ಭಗವಾನ್ ಆರಾಧನೆಯಲ್ಲಿ ಈ ಕುಟುಂಬ ತೊಡಗಿತ್ತು. ಮಗುವಿನ ಆರೋಗ್ಯ ಮತ್ತು ಭವಿಷ್ಯದ ವಿಚಾರದಲ್ಲಿ ಕುಟುಂಬಕ್ಕೆ ಶುಭ ಸುದ್ದಿ ಸಿಕ್ಕಿದ ನಂತರ ಮನೆಯವರು ಕಲ್ಕಿ ಭಕ್ತರಾದರು.

ಆ ನಂತರ ಮನೆಯ ಹೆಣ್ಮಕ್ಕಳು ಕಲ್ಕಿ ಭಜನೆಗಳಿಗೆ ಹೋಗಲಾರಂಭಿಸಿದರು. ಇದ್ಯಾವುದಕ್ಕೂ ನಾಗರಾಜಪ್ಪ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಬಳಿಕ ಕುಟುಂಬದ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ ಎಂದು ಅವರು ವಿವರಿಸುತ್ತಾರೆ.

ಜೇನು ತುಪ್ಪ ಹೇಗೆ ಬಂತು?
ನಾಗರಾಜಪ್ಪನವರ ಪತ್ನಿ ಮಂಜುಳಾರವರು ದೀಪಾವಳಿಯ ಲಕ್ಷ್ಮೀ ಪೂಜೆ ಮಾಡುತ್ತಿರುವಾಗ ಇದರ ಮೊದಲ ಸುಳಿವು ದೊರಕಿತ್ತೆಂದು ಮನೆಯವರು ವಿವರಿಸಿದ್ದಾರೆ.

ತನಗೇನು ಹರಸುತ್ತೀ ಎಂದು ಮಂಜುಳಾ ಮನದಲ್ಲೇ ಕೇಳಿಕೊಂಡಾಗ, ನಾಳೆ ಬೆಳಿಗ್ಗೆ 8 ಗಂಟೆಗೆ ನಿರೀಕ್ಷಿಸು ಎಂದು ಭಗವಾನ್ ಹರಸಿದ್ದರು ಎಂದು ನಾಗರಾಜಪ್ಪ ತಿಳಿಸಿದ್ದಾರೆ.

ಇದರಂತೆ ಮಂಗಳವಾರ ಬೆಳಿಗ್ಗೆ ಸರಿಯಾಗಿ ಎಂಟು ಗಂಟೆಗೆ ಜೇನು ತುಪ್ಪ ಸುರಿಯಲು ಆರಂಭವಾಗಿದೆ. ನಂತರ ಜನ ಸೇರಲು ಆರಂಭವಾಗುತ್ತಿದ್ದಂತೆ ತಂತಾನೇ ನಿಂತು ಹೋಗಿದೆ. ಜನರನ್ನು ನಿಯಂತ್ರಿಸಲು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಇದು ವೈಜ್ಞಾನಿಕ ಸತ್ಯವೇ?
ಯಾವ ಕಾರಣಕ್ಕೂ ಇದು ಅಸಾಧ್ಯ ಎಂದು ವಿಚಾರವಾದಿಗಳು ಮತ್ತು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಆಧುನಿಕ ಯುಗದಲ್ಲಿ ಇಂತಹ ಪವಾಡಗಳನ್ನು ನಂಬಲು ಸಾಧ್ಯವಿಲ್ಲ. ನಾವು ಕೊಡುವ ಫೋಟೋದಿಂದ ತುಪ್ಪ ಸುರಿಸಲು ಸಿದ್ಧರಿದ್ದರೆ ನಾವಿದನ್ನು ನಂಬುತ್ತೇವೆ ಎಂದು ನಟರಾಜ್ ಹುಲಿಕಲ್ಲು ಸವಾಲು ಹಾಕುತ್ತಾರೆ.

ಫೋಟೋದಿಂದ ಜೇನುತುಪ್ಪ ಬರುವ ಇಂತಹ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಇದರಲ್ಲಿ ಸತ್ಯಾಂಶವಿರುವುದಿಲ್ಲ. ಕೆಲವೊಂದು ರಾಸಾಯನಿಕಗಳನ್ನು ಫೋಟೋ ತಯಾರು ಮಾಡುವಾಗಲೇ ಹಚ್ಚಿದ ನಂತರ ಅದನ್ನು ಕಾರ್ಯಗತಗೊಳಿಸಲಾಗುತ್ತದೆ ಎಂದು ಮತ್ತೊಬ್ಬ ವಿಚಾರವಾದಿ ಹಾಗೂ ತಜ್ಞ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ