ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ವಪಕ್ಷ ನಿಯೋಗವು ಹೆಚ್ಚುವರಿ ನೆರೆ ಪರಿಹಾರ ನೀಡುವಂತೆ ಸಲ್ಲಿಸಿದ ಬೇಡಿಕೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಗೃಹ ಸಚಿವ ಚಿದಂಬರಂ ಮತ್ತು ವಿತ್ತ ಸಚಿವ ಪ್ರಣಬ್ ಮುಖರ್ಜಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ಸಕಲ ನೆರವನ್ನೂ ನೀಡುವ ಭರವಸೆ ನೀಡಿದ್ದಾರೆ.
ಸಂಜೆ ಪ್ರಧಾನಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗವು, ರಾಜ್ಯದಲ್ಲುಂಟಾದ ಪ್ರಕೃತಿ ವಿಕೋಪಕ್ಕೆ ಹೆಚ್ಚುವರಿ ನೆರವನ್ನು ನೀಡಬೇಕೆಂಬ ಮನವಿಯನ್ನು ಸಲ್ಲಿಸಿತು.
ಪ್ರವಾಹದ ನಂತರದ ಪರಿಸ್ಥಿತಿಯನ್ನು ಕೂಲಂಕಷವಾಗಿ ವಿವರಿಸಿದ ನಿಯೋಗವು, ಪುನರ್ವಸತಿ ಮತ್ತು ಗ್ರಾಮ ನಿರ್ಮಾಣಗಳಿಗಾಗಿ ಹೆಚ್ಚಿನ ಹಣದ ಅವಶ್ಯಕತೆಯಿರುವುದನ್ನು ಎತ್ತಿ ತೋರಿಸಿತು. ಹೆಚ್ಚುವರಿ ಹಣಕಾಸು ನೆರವನ್ನು ನೀಡಬೇಕು ಎಂದು ಬೇಡಿಕೆ ಸಲ್ಲಿಸಿದ ರಾಜ್ಯವು, ಕೇಂದ್ರ ಪ್ರಕಟಿಸಿದ್ದ 6,600 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕೋರಿತು.
ಪ್ರಮುಖ ಬೇಡಿಕೆಗಳು..
- ಪರಿಹಾರ ರೂಪದಲ್ಲಿ 6,600 ರೂಪಾಯಿ ನೀಡಬೇಕು.
- ಈ ಮೊದಲು ಬರ ನೆಲೆಸಿತ್ತು. ಆಮೇಲೆ ನೆರೆ ಬಂತು. ರೈತರು ಬ್ಯಾಂಕುಗಳಿಂದ ಪಡೆದಿರುವ ಸಾಲವನ್ನು ಮರಳಿಸುವಷ್ಟು ಶಕ್ತರಲ್ಲ. ಅವರ ಸಾಲವನ್ನು ಮನ್ನಾ ಮಾಡಬೇಕು.
- ಬೆಳೆ ಹಾನಿಗೆ ಈಗ ನೀಡಲಾಗುತ್ತಿರುವ 1,000 ರೂಪಾಯಿಗಳಿಂದ 3,000 ರೂಪಾಯಿಗಳವರೆಗಿನ ಪರಿಹಾರ ಏನೇನೂ ಸಾಲದು. ಅದನ್ನು ದ್ವಿಗುಣಗೊಳಿಸಬೇಕು.
- ನಿರ್ವಸಿತರಿಗೆ ಕೇಂದ್ರದ ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ಒಂದು ಲಕ್ಷ ಮನೆ ಕಟ್ಟಿ ಕೊಡಬೇಕು.
ಸಕಲ ನೆರವು ಪ್ರಧಾನಿ ಅಭಯ.. ಉತ್ತರ ಕರ್ನಾಟಕದಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಕಣ್ಣಾರೆ ಕಂಡಿದ್ದ ಪ್ರಧಾನಿ ಸಕಲ ರೀತಿಯ ನೆರವು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಭರವಸೆ ನೀಡಿದ್ದಾರೆ.
ತುರ್ತು ಪರಿಹಾರದ ಕುರಿತು ಕೂಡ ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ. ಜನತೆಯ ರಕ್ಷಣೆಗಾಗಿ ಕಾನೂನುಗಳಲ್ಲಿ ಅಗತ್ಯ ಬದಲಾವಣೆ ತರಲು ಕೇಂದ್ರ ಸಿದ್ಧವಿದೆ. ಯಾವುದೇ ಸಹಕಾರ ನೀಡಲು ಸರಕಾರ ಹಿಂದೇಟು ಹಾಕದು ಎಂದು ಮನಮೋಹನ್ ಸಿಂಗ್ ಆಶ್ವಾಸನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಸಿಎಂ ಶ್ಲಾಘನೆ.. ಭೇಟಿಯಿಂದ ನಿಜಕ್ಕೂ ಅಚ್ಚರಿಯಾಗಿದೆ. ಮನಮೋಹನ್ ಸಿಂಗ್‌ರವರನ್ನು ಕಂಡು ಮಾತನಾಡಿಸಿದಾಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಕಂಡು ಗೌರವಿಸಿದಂತಾಯಿತು ಎಂದು ಯಡಿಯೂರಪ್ಪ ನುಡಿದರು.
ಗೃಹ ಸಚಿವ ಮತ್ತು ಹಣಕಾಸು ಸಚಿವರು ಕೂಡ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದ ಸಿಎಂ, ಚಿದಂಬರಂರವರು ನೆರೆಯನ್ನು ಸುನಾಮಿಗೆ ಹೋಲಿಸಿದರು ಎಂದು ವಿವರಣೆ ನೀಡಿದರು.
ಗುಜರಾತ್ ಭೂಕಂಪ ಮತ್ತು ಸುನಾಮಿಗೆ ಸ್ಪಂದಿಸಿದ ರೀತಿಯಲ್ಲಿಯೇ ಈ ಬಾರಿಯ ಕರ್ನಾಟಕ ಪ್ರವಾಹ ಪರಿಸ್ಥಿತಿಯ ವಿರುದ್ಧ ಈಜಲು ಕೇಂದ್ರ ಸರಕಾರವು ಸಹಕರಿಸಲಿದೆ ಎಂದು ಅವರು ಭರವಸೆ ನೀಡಿದ್ದಾರೆ ಎಂದರು.
ನಿಯೋಗದಲ್ಲಿದ್ದ ಪ್ರಮುಖರು.. ಯಡಿಯೂರಪ್ಪ ನೇತೃತ್ವದ ಸರ್ವಪಕ್ಷ ನಿಯೋಗದಲ್ಲಿ ಗೃಹ ಸಚಿವ ವಿ.ಎಸ್. ಆಚಾರ್ಯ, ಕಂದಾಯ ಸಚಿವ ಕರುಣಾಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಅನಂತ್ ಕುಮಾರ್, ಸಂಸದ ಡಿ.ಬಿ. ಚಂದ್ರೇಗೌಡ, ಬಿಜೆಪಿ ನಾಯಕ ಧನಂಜಯ್ ಕುಮಾರ್ ಮತ್ತು ಜೆಡಿಯು ನಾಯಕರಿದ್ದರು.
ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ, ಕಾನೂನು ಸಚಿವ ವೀರಪ್ಪ ಮೊಯ್ಲಿ ಮತ್ತು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಕೂಡ ರಾಜ್ಯದ ನಿಯೋಗವನ್ನು ಸೇರಿಕೊಂಡಿದ್ದರು.
ಉಳಿದಂತೆ ರಾಜ್ಯದಿಂದ ಯಾವುದೇ ಕಾಂಗ್ರೆಸ್ ನಾಯಕರು ಸರ್ವಪಕ್ಷ ನಿಯೋಗದೊಂದಿಗೆ ಕೇಂದ್ರಕ್ಕೆ ಹೋಗಿರಲಿಲ್ಲ. ಜೆಡಿಎಸ್ ಈ ಮೊದಲೇ ಸರ್ವಪಕ್ಷ ನಿಯೋಗದ ಬಗ್ಗೆ ಕ್ಯಾತೆ ತೆಗೆದು ದೂರವೇ ನಿಂತಿತ್ತು.