ದೊಡ್ಡಬಳ್ಳಾಪುರ, ಬುಧವಾರ, 21 ಅಕ್ಟೋಬರ್ 2009( 15:40 IST )
ಹಲವು ಹನ್ನೊಂದು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ರೌಡೀಷೀಟರ್ ಪ್ರಕಾಶ ಎಂಬುವವನನ್ನು ಇಲ್ಲಿನ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಬಹಳ ವರ್ಷಗಳಿಂದ ಜನರನ್ನು ಬೆದರಿಸಿ ಹಣ-ಒಡವೆ ಲೂಟಿ ಮಾಡುತ್ತಿದ್ದ ಈತ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ. ಇತ್ತೀಚೆಗೆ ವೃದ್ದೆಯೊಬ್ಬರನ್ನು ಬೆದರಿಸಿ ಚಿನ್ನದ ಸರವನ್ನು ಕಸಿದುಕೊಂಡ ಆರೋಪದ ಮೇಲೆ ಈಗ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಒಂಟಿಯಾಗಿ ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡುವುದು, ಮದ್ಯಪಾನ ಮಾಡಿ ಗಲಾಟೆ ಮಾಡುವುದು ಅವನ ಚಾಳಿಯಾಗಿತ್ತು. ಹಲವರ ಮೇಲೆ ಪ್ರಾಣಾಂತಿಕ ಹಲ್ಲೆ ಮಾಡಿರುವುದೂ ಸೇರಿದಂತೆ, ಇನ್ನೂ ಹಲವು ಗಂಭೀರ ಪ್ರಕರಣಗಳಲ್ಲಿ ಈತನ ಹೆಸರು ಆರೋಪ ಪಟ್ಟಿಯಲ್ಲಿ ಸೇರಿತ್ತು.
ವಿಪರ್ಯಾಸವೆಂದರೆ, ಯಾವ ಪ್ರಕರಣದಲ್ಲೂ ಬಲವಾದ ಸಾಕ್ಷಿಗಳು ಸಿಗುತ್ತಿರಲಿಲ್ಲವಾದ್ದರಿಂದ ಈತನಿಗೆ ಶಿಕ್ಷೆಯಾಗುತ್ತಿರಲಿಲ್ಲ ಹಾಗೂ ಈತನ ಬೆದರಿಕೆಗೆ ಹೆದರಿ ಯಾರೂ ಕೂಡ ಅವನ ವಿರುದ್ಧ ಸಾಕ್ಷಿ ಹೇಳಲು ಬರುತ್ತಿರಲಿಲ್ಲ, ಪೊಲೀಸರಿಗೆ ದೂರು ಕೊಡುತ್ತಿರಲಿಲ್ಲ. ಈಗ ಈತನನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.