ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 5 ವರ್ಷದಲ್ಲಿ 18 ಯುವತಿಯರ ಪ್ರೀತಿಸಿ ಕೊಲೆಗೈದವನ ಸೆರೆ (Mohan Kumar | Love marriage | killer | Mangalore)
Feedback Print Bookmark and Share
 
ಕಳೆದ ಐದಾರು ವರ್ಷಗಳಿಂದ 18ಕ್ಕೂ ಹೆಚ್ಚು ಅಮಾಯಕ ಯುವತಿಯರನ್ನು ಪ್ರೀತಿಸಿ, ಮದುವೆಯಾಗಿ ಅತ್ಯಾಚಾರಗೈದು ನಂತರ ಕೊಲೆಗೈದು ಪರಾರಿಯಾಗುತ್ತಿದ್ದ ಕ್ರೂರ ಸರಣಿ ಹಂತಕ ಮೋಹನ್ ಕುಮಾರ್ ಎಂಬ ಶಾಲಾ ಶಿಕ್ಷಕನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮೋಹನ್ ಕುಮಾರ್ ಆಲಿಯಾಸ್ ಆನಂದ್ (46) ಬಂಟ್ವಾಳದ ಕನ್ಯಾನ ನಿವಾಸಿಯಾಗಿದ್ದು, ಇಲ್ಲಿನ ಅಂಗಡಿ ಎಂಬಲ್ಲಿನ ಖಾಸಗಿ ಶಾಲೆಯೊಂದರಲ್ಲಿ 1998ರಿಂದ 2003ರವರೆಗೆ ತಾತ್ಕಾಲಿಕ ಶಿಕ್ಷಕನಾಗಿದ್ದ. 2005ರ ನಂತರ ಈತ ತನ್ನ ಮೇಸ್ಟ್ರು ಎಂಬ ಉಪನಾಮವನ್ನು ಬಳಸಿಕೊಂಡು ಅಪರಾಧ ಕೃತ್ಯಗಳಿಗೆ ಇಳಿದಿದ್ದ. ಆದರೆ ಯಾವುದೇ ಹಂತದಲ್ಲಿ ಸಾಕ್ಷ್ಯಗಳನ್ನು ಉಳಿಸಿಕೊಳ್ಳದೆ ಈತ ಪರಾರಿಯಾಗುತ್ತಿದ್ದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಕೇಳರಿಯದ ಕೊಲೆಗಾರನಿವನು..
ಪಾಪಿ ಮೋಹನ್ ಯುವತಿಯರ ಒಲವು ಗಿಟ್ಟಿಸಿಕೊಂಡು ಮದುವೆಯಾಗುವ ಭರವಸೆ ನೀಡುತ್ತಿದ್ದ. ತಾನು ಶಾಲಾ ಅಧ್ಯಾಪಕನೆಂದು ಹೇಳಿಕೊಳ್ಳುತ್ತಾ ಅವರಲ್ಲಿ ಭರವಸೆ ಹುಟ್ಟಿಸಿದ ನಂತರ, 'ಹಣ-ಆಭರಣ ತೆಗೆದುಕೊಂಡು ಬಾ, ಬೇರೆಡೆ ಹೋಗಿ ಮದುವೆಯಾಗೋಣ' ಎಂದು ಪುಸಲಾಯಿಸುತ್ತಿದ್ದ.

ಹೀಗೆ ಯುವತಿಯರನ್ನು ಒಲಿಸಿಕೊಂಡ ಆತ ಮೈಸೂರು, ಮಡಿಕೇರಿ, ಕೊಲ್ಲೂರು ಮುಂತಾದೆಡೆ ಕರೆದುಕೊಂಡು ಹೋಗಿ ಮದುವೆಯೂ ಆಗುತ್ತಿದ್ದ. ಅಲ್ಲೇ ಯಾವುದಾದರೂ ಲಾಡ್ಜ್‌ನಲ್ಲಿ 2-3 ದಿನಗಳ ಕಾಲ ಉಳಿದುಕೊಂಡು ಅತ್ಯಾಚಾರ ಮಾಡಿ ನಂತರ ಸೈನೈಡ್ ನೀಡಿ ಕ್ರೂರವಾಗಿ ಕೊಲೆಗೈಯುತ್ತಿದ್ದ.

ಬಹುತೇಕ ಸಂದರ್ಭಗಳಲ್ಲಿ ಆತ ತಾನು ಮದುವೆಯಾದ ಹುಡುಗಿ ಟಾಯ್ಲೆಟ್‌ಗೆ ಹೋಗುವ ಸಂದರ್ಭದಲ್ಲಿ ಗರ್ಭನಿರೋಧಕ ಮಾತ್ರೆಯಲ್ಲಿ ಸೈನೈಡ್ ಇಟ್ಟು ತಿನ್ನಿಸುತ್ತಿದ್ದ. ಬಹುತೇಕ ಮಂದಿ ಶೌಚಾಲಯದಲ್ಲೇ ಸತ್ತರೆ, ಕೆಲವರು ಹೊರಗೆ ಬಂದು ಈತನ ಜತೆ ಮಾತನಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಅಷ್ಟರಲ್ಲಿ ಯುವತಿಯರ ಆಭರಣ, ಹಣ ಮತ್ತಿತರ ಅಮೂಲ್ಯ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗುತ್ತಿದ್ದ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಯಾವುದೇ ಸಾಕ್ಷ್ಯ ಉಳಿಯದಂತೆ ಮಾಡುವಲ್ಲಿ ಮೋಹನ್ ಯಶಸ್ವಿಯಾಗುತ್ತಿದ್ದ.

ಜೀವನದಲ್ಲಿ ಜಿಗುಪ್ಸೆ...
ಹೀಗೆ ಕೊಲೆಯಾದ ಬಹುತೇಕ ಪ್ರಕರಣಗಳು ಅಪರಿಚಿತ ಯುವತಿಯ ಶವ ಪತ್ತೆ, ಯುವತಿ ಆತ್ಮಹತ್ಯೆ ಎಂಬಲ್ಲಿಗೆ ಮುಗಿದು ಹೋಗುತ್ತಿದ್ದವು. ಆತ ಯುವತಿಯರ ಆಪ್ತರು ಅಥವಾ ಮನೆಯವರ ಜತೆ ಯಾವುದೇ ರೀತಿಯ ಸಂಪರ್ಕ ಏರ್ಪಡದಂತೆ ಎಚ್ಚರಿಕೆ ವಹಿಸುತ್ತಿದ್ದ ಕಾರಣ ಈತನ ಮೇಲೆ ಯಾರಿಗೂ ಸಂಶಯ ಬಂದಿರಲಿಲ್ಲ.

ಯುವತಿಯರು ಕಾಣೆಯಾದ ನಂತರ ಅವರ ಮನೆಯವರು ಕಾಣೆಯಾಗಿರುವ ಪ್ರಕರಣಗಳನ್ನು ಪೊಲೀಸ್ ಠಾಣೆಗಳಲ್ಲಿ ದಾಖಲಿಸುತ್ತಿದ್ದರಾದರೂ, ಪ್ರಕರಣ ಭೇದಿಸಲು ಪೊಲೀಸರಿಗೆ ಸಾಧ್ಯವಾಗುತ್ತಿರಲಿಲ್ಲ.

ದಾರುಣವಾಗಿ ಕೊಲೆಯಾದವರು ಇವರು...
ಸುಳ್ಯ ಪೆರಾಜೆಯ ಬೇಬಿ ನಾಯಕ್ (25), ಪುತ್ತೂರಿನ ಕೆದಿಲದ ಶಾರದಾ (24), ಸುಳ್ಯ ಸಂಪಾಜೆಯ ಕಾವೇರಿ (30), ಕಾಸರಗೋಡಿನ ಮುಳ್ಳೇರಿಯಾದ ಪುಷ್ಪಾ (26), ಪುತ್ತೂರಿನ ವಿನುತಾ (24), ಬಂಟ್ವಾಳ ಮಿತ್ತೂರಿನ ಹೇಮಾ (24), ಬರಿಮಾರಿನ ಅನಿತಾ (22), ಬೆಳ್ತಂಗಡಿಯ ಮಡಂತ್ಯಾರಿನ ಯಶೋಧ (26), ಕಾಸರೋಡಿನ ಸರೋಜಿನಿ ವಿಜಯಲಕ್ಷ್ಮಿ (26), ಉಪ್ಪಳದ ಸರೋಜಿನಿ (27), ಬಂಟ್ವಾಳದ ಕರಿಯಂಗಳದ ಶಶಿಕಲಾ (28), ಸುಳ್ಯ ಪೆರುವಾಜೆಯ ಸುನಂದ (25), ವಾಮದಪದವಿನ ಲೀಲಾವತಿ (32), ಕಂಕನಾಡಿಯ ಶಾಂತಾ (35), ನೆಲ್ಯಾಡಿಯ ವನಿತಾ (22), ಬಜ್ಪೆ ಸಮೀಪದ ಮುಚ್ಚೂರಿನ ಸುಜಾತ (28) ಎಂಬ ಯುವತಿಯರನ್ನು ಕೊಲೆ ಮಾಡಿದ ಕುರಿತು ಸ್ಪಷ್ಟ ಮಾಹಿತಿಗಳು ಲಭಿಸಿವೆ. ಇನ್ನುಳಿದ ಇಬ್ಬರು ಹುಡುಗಿಯರ ವಿವರಗಳು ಲಭಿಸಿಲ್ಲ. ಆದರೆ ಅವರಿಬ್ಬರೂ ಕಾಸರಗೋಡಿನವರು ಎಂದು ಹೇಳಲಾಗಿದೆ.

ಆರೋಪಿ ಕಾಸರಗೋಡಿನಲ್ಲಿ 5, ಬಂಟ್ವಾಳದಲ್ಲಿ 4, ಪುತ್ತೂರಿನಲ್ಲಿ 3, ಸುಳ್ಯ, ಬೆಳ್ತಂಗಡಿಗಳಲ್ಲಿ ತಲಾ 2 ಹಾಗೂ ಮೂಡಬಿದಿರೆ, ಮಂಗಳೂರಿನಲ್ಲಿ ತಲಾ ಒಬ್ಬೊಬ್ಬ ಯುವತಿಯರನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ನಂತರ ಕೊಲೆ ಮಾಡಿದ್ದ ಎಂದು ಪಶ್ಚಿಮ ವಲಯ ಐಜಿಪಿ ಗೋಪಾಲ ಹೊಸೂರ್ ತಿಳಿಸಿದ್ದಾರೆ.

18 ಯುವತಿಯರಲ್ಲಿ 10 ಮಂದಿಯನ್ನು ಮೈಸೂರಿನ ಬಸ್‌ ನಿಲ್ದಾಣದ ಸಮೀಪ, 3 ಮಂದಿಯನ್ನು ಮಡಿಕೇರಿಯಲ್ಲಿ, ಹಾಸನ, ಬೆಂಗಳೂರು ಮತ್ತು ಕೊಲ್ಲೂರುಗಳಲ್ಲಿ ತಲಾ ಇಬ್ಬರನ್ನು ಮೋಹನ್ ಕೊಲೆ ಮಾಡಿದ್ದ ಎಂದು ಪೊಲೀಸರು ಹೇಳಿದರು.

ಬದುಕುಳಿದವರು ಹಲವರು...
ಈತನ ಕುಕೃತ್ಯಗಳು ಬಯಲಾಗುತ್ತಿದ್ದಂತೆ ಹಲವು ಯುವತಿಯರು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ಒಂದೆರಡು ತಿಂಗಳಲ್ಲಿ ಈತ ಕನಿಷ್ಠ ಮೂವರು ಯುವತಿಯರನ್ನು ಮದುವೆಯಾಗಿ, ಅತ್ಯಾಚಾರ ಮಾಡಿ ಕೊಲೆ ಮಾಡುವ ಸಂಚು ರೂಪಿಸಿದ್ದ. ಅಲ್ಲದೆ ಈಗ ಪ್ರಕರಣ ಭೇದಿಸಲು ಅಸಾಧ್ಯವಾಗಿರುತ್ತಿದ್ದರೆ, ಮುಂದಿನ ದಿನಗಳಲ್ಲಿ ಅದೆಷ್ಟೋ ಯುವತಿಯರು ಈತನಿಗೆ ತರ್ಪಣವಾಗಬೇಕಾಗಿತ್ತು.

ಈಗಲೂ ಇಬ್ಬರು ಹೆಂಡತಿಯರಿದ್ದಾರೆ..
ಕನಿಷ್ಠ 18 ಯುವತಿಯರನ್ನು ಮದುವೆಯಾಗಿ ಕೊಲೆಗೈದಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದರೂ, ಪ್ರಸಕ್ತ ಇಬ್ಬರು ಹೆಂಡತಿಯರ ಜತೆ ಆತ ಜೀವನ ಸಾಗಿಸುತ್ತಿದ್ದ. ಒಬ್ಬಾಕೆ ಉಪ್ಪಳದವಳಾದರೆ ಮತ್ತೊಬ್ಬಳು ದೇರಳಕಟ್ಟೆಯವಳು.

ಕಾರ್ಯಾಚರಣೆ ಹೇಗೆ?
ಬರಿಮಾರಿನ ಅನಿತಾ ನಾಪತ್ತೆಯಾದ ಪ್ರಕರಣದಲ್ಲಿ ಸಂಶಯಗೊಂಡ ಪುತ್ತೂರು ಎಎಸ್‌ಪಿ ಚಂದ್ರಗುಪ್ತಾರವರು ಮೋಹನ್ ಕುಮಾರ್ ಕೈವಾಡವಿರುವ ಸುಳಿವು ಪಡೆದುಕೊಂಡಿದ್ದರು. ನಂತರ ಅವರ ಬಂಟ್ವಾಳ ಮತ್ತು ಮಂಗಳೂರು ಪೊಲೀಸರ ಸಹಕಾರ ಪಡೆದು ಪ್ರಕರಣವನ್ನು ಭೇದಿಸಲು ತಂತ್ರ ರೂಪಿಸಿದ್ದರು.

ಮೊಬೈಲ್ ಟ್ರೇಸ್ ಸೇರಿದಂತೆ ಇನ್ನಿತರ ಮೂಲಗಳನ್ನು ಬಳಸಿ ಆರೋಪಿಯನ್ನು ಪೊಲೀಸರು ಬಲೆಗೆ ಕೆಡವಿದ್ದು, ಬಂಟ್ವಾಳ ಪೊಲೀಸರು ದೇರಳಕಟ್ಟೆಯಲ್ಲಿನ ಆತನ ಹೆಂಡತಿ ಮನೆಯಿಂದ ಬಂಧಿಸಿದರು.

ಇಂತಹ ಘಟನೆ ದಶಕಗಳಲ್ಲೇ ನಡೆದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ವಿಶೇಷ ಆಸಕ್ತಿ ವಹಿಸುತ್ತಿದ್ದು, ಐಜಿಪಿ ಹೊಸೂರ್ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಾಡಿರುವ 18 ಕೊಲೆಗಳನ್ನು ಮೋಹನ್ ಒಪ್ಪಿಕೊಂಡಿದ್ದು, ಇನ್ನೂ ಹೆಚ್ಚಿನ ಹತ್ಯೆ ಮಾಡಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ