ಲವ್ ಜಿಹಾದ್ ಹೆಸರಿನಲ್ಲಿ ಯುವತಿಯೊಬ್ಬಳನ್ನು ಮತಾಂತರಗೊಳಿಸಲಾಗಿದೆ ಎನ್ನಲಾದ ಪ್ರಕರಣದ ವಿಚಾರಣೆಯನ್ನು ಬುಧವಾರ ಮುಂದುವರಿಸಿದ ಬೆಂಗಳೂರು ಉಚ್ಛ ನ್ಯಾಯಾಲಯವು, ಆಕೆಯನ್ನು ಪೋಷಕರ ವಶಕ್ಕೊಪ್ಪಿಸುವಂತೆ ಆದೇಶಿಸಿದೆ.
ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್, ಯುವತಿ ಸೆಲ್ಜಾರಾಜ್‌ಳನ್ನು ಮೂರು ವಾರಗಳ ಕಾಲ ಪೋಷಕರ ವಶಕ್ಕೊಪ್ಪಿಸುವಂತೆ ಪೊಲೀಸರಿಗೆ ಆದೇಶ ನೀಡಿತು.
ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಗಿ ನಿನ್ನೆ ನ್ಯಾಯಾಲಯಕ್ಕೆ ತಿಳಿಸಿದ್ದ ಸೆಲ್ಜಾರಾಜ್‌ಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಪೂರಕ ವಿಚಾರಗಳನ್ನು ಆಲಿಸಿದ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಸೆಲ್ಜಾರಾಜ್‌ಳನ್ನು ಮತಾಂತರಗೊಳಿಸಲು ಯಾರಾದರೂ ಒತ್ತಡ ಹೇರಿದ್ದರೇ ಮತ್ತು ಮದರಸಾ ಶಿಕ್ಷಣ ಪಡೆಯಲು ಆಮಿಷ ಒಡ್ಡಲಾಗಿತ್ತೇ ಮುಂತಾದ ವಿಚಾರಗಳ ಕುರಿತು ಕೂಲಂಕಷ ತನಿಖೆ ನಡೆಸುವಂತೆಯೂ ಇದೇ ಸಂದರ್ಭದಲ್ಲಿ ಡಿಜಿಪಿಗೆ ಆದೇಶ ನೀಡಲಾಯಿತು.
ವ್ಯಾಪಕವಾಗುತ್ತಿರುವ ಲವ್ ಜಿಹಾದ್ ಕುರಿತು ಗಮನ ಹರಿಸಿದ ನ್ಯಾಯಾಲಯವು, ಸೆಲ್ಜಾರಾಜ್‌ಳ ಪ್ರಿಯಕರ ಎನ್ನಲಾಗಿರುವ ಕೇರಳದ ಕಣ್ಣೂರಿನ ಆಸ್ಗರ್ ಎಂಬಾತನ ಹಿನ್ನಲೆ ಮತ್ತು ಲವ್ ಜಿಹಾದ್ ಕುರಿತು ಮೂರು ವಾರಗಳಲ್ಲಿ ತನಿಖೆ ನಡೆಸಿ ಪೀಠಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಪ್ರಕರಣದ ವಿಚಾರಣೆಯನ್ನು ನವೆಂಬರ್ 13ಕ್ಕೆ ಮುಂದೂಡಲಾಗಿದೆ.
ಪ್ರಕರಣದ ಹಿನ್ನಲೆ.. ಸೆಲ್ಜಾರಾಜ್‌ಳನ್ನು ಲವ್ ಜಿಹಾದ್ ಹೆಸರಲ್ಲಿ ಪ್ರೀತಿಸಿ, ಮತಾಂತರ ಮಾಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಾಣೆಯಾಗಿದ್ದ ತಮ್ಮ ಮಗಳನ್ನು ಹುಡುಕಿ ಕೊಡುವಂತೆ ಆಕೆಯ ತಂದೆ ಸಿ. ಸೆಲ್ವರಾಜ್ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ನ್ಯಾಯಾಲಯದ ಆದೇಶದಂತೆ ಚಾಮರಾಜನಗರ ಪೊಲೀಸರು ಮಂಗಳವಾರ ಸೆಲ್ವರಾಜ್‌ಳನ್ನು ಹಾಜರುಪಡಿಸಿದ್ದರು. ಈ ಸಂದರ್ಭದಲ್ಲಿ ಆಕೆ, ತಾನು ಸ್ವಇಚ್ಛೆಯಿಂದಲೇ ಆಸ್ಗರ್‌ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಸದ್ಯದಲ್ಲೇ ಇಸ್ಲಾಂ ಧರ್ಮವನ್ನು ಸ್ವೀಕರಿಸಲಿದ್ದೇನೆ ಎಂದು ಹೇಳಿದ್ದಳು.
ಸೆಲ್ಜಾರಾಜ್ ತನ್ನಿಚ್ಛೆಯಿಂದಲೇ ಮತಾಂತರ ಮತ್ತು ಮದುವೆಯಾಗಿರುವುದರಿಂದ ಈ ಪ್ರಕರಣವನ್ನು ಲವ್ ಜಿಹಾದ್ ಎಂದು ಹೇಳಲಾಗದು ಎಂದು ಇದೇ ಸಂದರ್ಭದಲ್ಲಿ ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಆದರೆ ಹೆಚ್ಚಿನ ವಿವರಗಳನ್ನು ಕಲೆ ಹಾಕುವಂತೆ ಇದೇ ಸಂದರ್ಭದಲ್ಲಿ ಕೋರ್ಟ್ ಸೂಚಿಸಿತ್ತು.