ನಕ್ಸಲರೆಂದು ಕರೆಸಿಕೊಳ್ಳುತ್ತಿರುವವರು ತಮ್ಮ ಶಸ್ತ್ರಾಸ್ತ್ರವನ್ನು ತ್ಯಜಿಸಿ ಮಾತುಕತೆಗೆ ಬರುವುದಾದರೆ, ಅವರಿಗೆ ನೆರವಾಗಲು ತಾವು ಸಿದ್ಧ ಎಂದು ಗೃಹಸಚಿವ ವಿ.ಎಸ್.ಆಚಾರ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ನಗರದ ರಿಚ್ಮಂಡ್ ವೃತ್ತದ ಸಮೀಪ ಇರುವ ಒಂದನೇ ಕೆಎಸ್ಆರ್‌ಪಿ ಬೆಟಾಲಿಯನ್ ಆವರಣದಲ್ಲಿ ನೂತನವಾಗಿ ಆರಂಭಿಸಲಾಗಿರುವ ಆಂತರಿಕ ಭದ್ರತಾ ವಿಭಾಗದ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬೈಯಲ್ಲಿ ಉಗ್ರರು ದಾಳಿ ನಡೆಸಿದ ನಂತರ ಯಾವಾಗಲೂ ಜಾಗರೂಕತೆಯಿಂದಿರುವ ಸರ್ಕಾರ, ರಾಜ್ಯದಲ್ಲಿ ನೂತನವಾದ ಆಂತರಿಕ ಭದ್ರತಾ ವಿಭಾಗವನ್ನು ಆರಂಭಿಸಿದ್ದು, ಇದನ್ನು ನಕ್ಸಲ್ ನಿಗ್ರಹ ದಳ, ಉಗ್ರರ ನಿಗ್ರಹ ದಳ ಹಾಗೂ ಕರಾವಳಿ ರಕ್ಷಣಾ ದಳ ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಎಂದು ಆಚಾರ್ಯ ತಿಳಿಸಿದರು.
ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳು ಕಡಿಮೆಯಿರುವುದರಿಂದ ನಾವು ಆತಂಕಪಡುವ ಅಗತ್ಯವಿಲ್ಲ ಎಂದು ನುಡಿದ ಆಚಾರ್ಯ, ನಗರ ಸಶಸ್ತ್ರ ಮೀಸಲು ಪಡೆಯ 200 ಮಂದಿ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಿ ಉಗ್ರರ ಕಾರ್ಯಾಚರಣೆಯ ವಿರುದ್ಧ ಯಾವುದೇ ಸಮಯದಲ್ಲಿ ಸೆಣಸಾಡಲು ಸಿದ್ಧರಿರುವಂತೆ ಸಜ್ಜುಗೊಳಿಸಲಾಗುವುದು ಎಂದು ನುಡಿದರು.