ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಬೇಕು ಎಂಬುದು ಬಹುತೇಕ ಶಾಸಕರ ಅಭಿಪ್ರಾಯವಾಗಿದೆ, ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬೆಂಬಲಿಗರು ಯಾವುದೇ ತ್ಯಾಗಕ್ಕೂ ಸಿದ್ದರಾಗಬೇಕಾಗಿದೆ ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಅಸಮಾಧಾನ ಹೊರಹಾಕಿದ್ದಾರೆ.
ಅವರ ನಡತೆಯಿಂದ ರೋಸಿ ಹೋಗಿರುವ ಶಾಸಕರು ಮತ್ತು ಸಂಸದರ ಸಂಖ್ಯೆ ಪಕ್ಷದಲ್ಲಿ ದೊಡ್ಡದಿದೆ ಎಂದು ಅವರು ಗುರುವಾರ ಇಲ್ಲಿ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಯಾವುದೇ ವ್ಯಕ್ತಿಯ ಅಥವಾ ಯಾವುದೇ ಒಂದು ಜಾತಿಯ ಸರ್ಕಾರ ಅಲ್ಲ. ಯಾವುದೇ ವ್ಯಕ್ತಿಯ ಸರ್ವಾಧಿಕಾರಿ ಸರ್ಕಾರವೂ ಅಲ್ಲ. ಯಾವುದೇ ಒಬ್ಬ ವ್ಯಕ್ತಿಯ ಸುತ್ತಮುತ್ತ ಇರುವ ಜನರ ಸರ್ಕಾರ ಅಲ್ಲ. ಹೀಗಾಗಿ ಅಂತಹ ಜನರು ಈ ಸರ್ಕಾರವನ್ನು ಹೈಜಾಕ್ ಮಾಡುವ ಪ್ರಯತ್ನ ಮಾಡಕೂಡದು.
ಮುಖ್ಯಮಂತ್ರಿ ಯಾರೇ ಇದ್ದರೂ ರಾಜ್ಯದಲ್ಲಿ ಐದು ವರ್ಷಕಾಲ ಬಿಜೆಪಿ ಸರ್ಕಾರವೇ ಇರಬೇಕು. ಯಡಿಯೂರಪ್ಪ ಮತ್ತು ಬೆಂಬಲಿಗರು ಪ್ರಸಂಗ ಬಂದರೆ ಯಾವುದೇ ತ್ಯಾಗಕ್ಕೂ ಸಿದ್ದರಾಗಬೇಕು ಎಂದು ಪುನರುಚ್ಚರಿಸಿದರು.