ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರೆಡ್ಡಿ ಸಹೋದರರ ನಡುವಿನ ಜಟಾಪಟಿಯ ಶಮನಕ್ಕೆ ಪಕ್ಷದ ಹೈಕಮಾಂಡ್, ಸಿಎಂ ಬೆಂಬಲಿಗರು, ಆರ್‌ಎಸ್‌ಎಸ್ ಮುಖಂಡರು ಪ್ರಯತ್ನಿಸಿದರು ಕೂಡ ಯಾವುದೇ ಫಲ ಕಂಡು ಬಂದಿಲ್ಲ. ಗುರುವಾರವಿಡೀ ಸಂಧಾನ ಸಭೆಗಳನ್ನು ನಡೆಸಿದರೂ ಎರಡೂ ಗುಂಪಿನ ನಾಯಕರು ಪಟ್ಟು ಸಡಿಲಿಸಿಲ್ಲ. ಇದೇ ನಿಲುವು ಮುಂದುವರಿದರೆ ಚುನಾವಣೆ ಒಂದೇ ಉಳಿದಿರುವ ಮಾರ್ಗ ಎಂದು ಜೇಟ್ಲಿ ಎಚ್ಚರಿಸಿದ್ದಾರೆ.
ಇದರಿಂದ ಬೇಸತ್ತ ಅವರು, 'ಯಾವುದಾದರೂ ಒಂದು ಗುಂಪು ತ್ಯಾಗಕ್ಕೆ ಸಿದ್ದವಾಗಬೇಕು. ಇಲ್ಲವಾದರೆ ಚುನಾವಣೆ ಅನಿವಾರ್ಯ' ಎಂದು ಎರಡೂ ಕಡೆಯವರಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಶೆಟ್ಟರ್-ಜೇಟ್ಲಿ ಭೇಟಿ:ವಿಧಾನಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಗುರುವಾರ ರಾತ್ರಿಯೂ ಅರುಣ್ ಜೇಟ್ಲಿ ಅವರನ್ನು ಖಾಸಗಿ ಹೋಟೆಲ್‌ವೊಂದರಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು. ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್‌ನಲ್ಲಿ ರೆಡ್ಡಿ ಬೆಂಬಲಿಗರು: ತಮ್ಮ ಜೊತೆ 45ಮಂದಿ ಶಾಸಕರಿದ್ದಾರೆ ಎಂದು ಗಣಿಧಣಿಗಳ ಗುಂಪು ಹೇಳಿಕೊಂಡಿದೆ. 15ಕ್ಕೂ ಹೆಚ್ಚು ಶಾಸಕರು ಇದೀಗ ಹೈದರಾಬಾದ್‌ನ ಹೊಟೇಲ್‌ನಲ್ಲಿ ತಂಗಿದ್ದಾರೆ. 10ಮಂದಿಗೆ ಗೋವಾದಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಇನ್ನು 10ಮಂದಿಯನ್ನು ಮುಂಬೈಗೆ ಕಳಿಸಲಾಗಿದೆ ಎಂದು ರೆಡ್ಡಿ ಬಳಗದ ಮೂಲಗಳು ತಿಳಿಸಿವೆ. ಪಕ್ಷದ ಹೈಕಮಾಂಡ್ ಮುಂದೆ ಪರೇಡ್ ಮಾಡಿಸುವವರೆಗೂ ಎಲ್ಲ ಶಾಸಕರನ್ನು ತಮ್ಮ ಹಿಡಿತಲ್ಲೇ ಇಟ್ಟುಕೊಳ್ಳಲು ರೆಡ್ಡಿ ಬಣ ನಿರ್ಧರಿಸಿದೆ.