ರಾಜಕೀಯ ಮತ್ತು ರಾಜಕೀಯ ಪಕ್ಷವೆಂದ ಮೇಲೆ ಅಭಿಪ್ರಾಯ ಭೇದ, ಗೊಂದಲವೂ ಸಹಜ. ಅದಕ್ಕೆ ಪಕ್ಷದಲ್ಲಿ ಬಂಡಾಯದ ಹೊಗೆ ಎದ್ದಿದೆ ಎಂದು ಯಾರೂ ವ್ಯಾಖ್ಯಾನಿಸಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಡಾಲರ್ಸ್ ಕಾಲೊನಿಯಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಆರ್ಎಸ್ಎಸ್ ಹಾಗೂ ಬಿಜೆಪಿಯ ಹಿರಿಯ ಮುಖಂಡರ ಜೊತೆಗಿನ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಪಕ್ಷಗಳಲ್ಲೂ ಇರಬಹುದಾದ ಗೊಂದಲ ನಮ್ಮ ಪಕ್ಷದಲ್ಲಿಯೂ ಸೃಷ್ಟಿಯಾಗಿದೆ. ಇದನ್ನು ನಾಲ್ಕು ಗೋಡೆಗಳ ನಡುವೆಯೇ ಪರಿಹರಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೆಡ್ಡಿ ಸಹೋದರರು ತಿರುಗಿಬಿದ್ದಿರುವಾಗಲೇ ಬಳ್ಳಾರಿ ಜಿಲ್ಲೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಎಷ್ಟರಮಟ್ಟಿಗೆ ಸರಿಎಂಬ ಪ್ರಶ್ನೆ ಸುದ್ದಿಗಾರರಿಂದ ತೂರಿಬಂದಾಗ, ಅದೊಂದು ಆಡಳಿತಾತ್ಮಕ ನಿರ್ಧಾರ, ಅದನ್ನು ನಾವು ಪ್ರಶ್ನಿಸುವುದು ಅಷ್ಟು ಉಚಿತವಾಗುವುದಿಲ್ಲ ಎಂಬ ಜಾಣ್ಮೆಯ ಉತ್ತರವನ್ನು ನೀಡಿದರು.
ಈಗ ಒದಗಿರುವ ರಾಜಕೀಯ ಗೊಂದಲಕ್ಕಿಂತಲೂ ರಾಜ್ಯದಲ್ಲಿನ ಪ್ರವಾಹದ ನಂತರದ ಪರಿಸ್ಥಿತಿಯೇ ದೊಡ್ಡದಾಗಿದೆ. ಆದ್ದರಿಂದ ಈ ಸಮಸ್ಯೆಯ ಪರಿಹಾರದ ಕುರಿತು ಚರ್ಚಿಸುವ ಕಾರಣದಿಂದ ಮುಖ್ಯಮಂತ್ರಿಯವರ ನಿವಾಸದಲ್ಲಿ ಸಭೆ ನಡೆಸಲು ಬಂದಿದ್ದೇವೆ ಎಂದು ಸದಾನಂದ ಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.