ಚಿತ್ರದುರ್ಗ, ಶುಕ್ರವಾರ, 30 ಅಕ್ಟೋಬರ್ 2009( 15:24 IST )
ಗಣಿ ರೆಡ್ಡಿಗಳು ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿಯಲು ಆಂಧ್ರಪ್ರದೇಶದ ಮುಖ್ಯಮಂತ್ರಿ ಕರ್ನಾಟಕಕ್ಕೆ ಭೇಟಿ ನೀಡಿರುವುದೇ ಪ್ರಮುಖ ಕಾರಣ ಎನ್ನುವ ಊಹಾಪೋಹ ಎದ್ದಿದೆ.
ರೆಡ್ಡಿಗಳ ಆತ್ಮೀಯ ವಲಯದ ಪ್ರಕಾರ ರೋಸಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ನಡೆಸಿದ ಮಾತುಕತೆ ರೆಡ್ಡಿ ಸಹೋದರರ ಆಕ್ರೋಶಕ್ಕೆ ಪ್ರಮುಖ ಕಾರಣ ಎಂದು ಕನ್ನಡಪ್ರಭದ ವಿಶೇಷ ವರದಿ ತಿಳಿಸಿದೆ.
ಕರ್ನಾಟಕದಲ್ಲಿ ಅದಿರು ತುಂಬಿಕೊಂಡು ಹೋಗುವ ಪ್ರತಿ ಲಾರಿಗೂ ಒಂದು ಸಾವಿರ ರೂಪಾಯಿ ಸುಂಕ ವಿಧಿಸಲಾಗುತ್ತದೆ ಎಂಬ ಸಂಗತಿಯನ್ನು ರೋಸಯ್ಯ ಅವರ ಗಮನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಂದಿದ್ದು ಈ ನಿಟ್ಟಿನಲ್ಲಿ ಆಂಧ್ರದಲ್ಲಿಯೂ ಏಕೆ ಪ್ರಯತ್ನಿಸಬಾರದು ಎಂಬ ಸಲಹೆ ನೀಡಿದ್ದಾರೆನ್ನಲಾಗಿದೆ. ಯಡಿಯೂರಪ್ಪ ನೀಡಿದ ಈ ಸಲಹೆ ರೆಡ್ಡಿ ಸಹೋದರರ ಭಿನ್ನಮತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಅಂಶಗಳಿಗೆ ಪುಷ್ಠಿ ನೀಡುವಂತೆ ಆಂಧ್ರ ಮುಖ್ಯಮಂತ್ರಿ ರೋಸಯ್ಯ ಅದಿರು ದಾಸ್ತಾನಿಗೆ ಸಂಬಂಧಿಸಿದಂತೆ ರೆಡ್ಡಿ ಬ್ರದರ್ಸ್ ಒಡೆತನದ ಓಬಳಾಪುರಂ ಮೈನ್ಸ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ. ಏತನ್ಮಧ್ಯೆ ತೆಲುಗು ದೇಶಂ ಕರ್ನಾಟಕ ಮಾದರಿಯಲ್ಲಿ ಅದಿರು ಸಾಗಾಣಿಕೆ ಲಾರಿಗಳಿಗೆ ಸುಂಕ ವಿಧಿಸುವ ಒತ್ತಾಯ ಮಾಡಿದೆ.
ರೆಡ್ಡಿ ಸಹೋದರರು ಆಂಧ್ರಪ್ರದೇಶದ ಕಡಪ ಜಿಲ್ಲೆಯ ಜಂಬಲಮಡುಗು ಪ್ರದೇಶದಲ್ಲಿ ಸುಮಾರು 25ಸಾವಿರ ಕೋಟಿ ರೂಪಾಯಿ ಬಂಡವಾಳ ಹೂಡಿ ಸ್ಥಾಪಿಸುತ್ತಿರುವ ಬ್ರಹ್ಮಿಣಿ ಉಕ್ಕು ಕಾರ್ಖಾನೆಯಲ್ಲಿ ವೈಎಸ್‌ಆರ್ ಪುತ್ರ ಜಗನ್‌ಮೋಹನ್ ರೆಡ್ಡಿ ಅವರ ಪಾಲುದಾರಿಕೆ ಇದೆ ಎನ್ನಲಾಗಿದೆ. ವೈಎಸ್‌ಆರ್ ನಿಧನಾ ನಂತರ ರೆಡ್ಡಿ ಸಹೋದರರಿಗೆ ಸಾಕಷ್ಟು ಹೊಡೆತ ಬಿದ್ದಂತಾಗಿದೆ.
ಜಗನ್ ಮುಖ್ಯಮಂತ್ರಿ ಹುದ್ದೆಗೆ ರೋಸಯ್ಯ ಅಡ್ಡ ಬಂದಿರುವುದು ಕೂಡ ರೆಡ್ಡಿ ಸಹೋದರರಿಗೆ ನುಂಗಲಾರದ ತುತ್ತಾಗಿದ್ದು ಇಂತಹ ಸಂದರ್ಭದಲ್ಲಿ ಯಡಿಯೂರಪ್ಪ ಅವರು ರೋಸಯ್ಯ ಅವರಿಗೆ ನೀಡಿರುವ ಸಲಹೆ ಮತ್ತಷ್ಟು ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.