ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿಯ ವರಿಷ್ಠ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಕಳೆದ ಮೂರು ದಿನಗಳಿಂದ ಸಂಧಾನ ನಡೆಸಿದ ಅರುಣ್ ಜೇಟ್ಲಿ ಶುಕ್ರವಾರ ದೆಹಲಿಗೆ ವಾಪಸ್ ಆಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಅರಿತುಕೊಂಡಿದ್ದೇನೆ. ಈ ಬಗ್ಗೆ ಎಲ್ಲಾ ಮುಖಂಡರ ಜೊತೆ ಸಮಾಲೋಚನೆ ಮಾಡಿದ್ದು, ಶೀಘ್ರದಲ್ಲೇ ಎಲ್ಲವೂ ಬಗೆಹರಿಯಲಿದೆ ಎಂದರು.
ಪಕ್ಷದ ಚೌಕಟ್ಟಿನಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಾಗುವುದು ಎಂದವರು ಹೇಳಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಂತರ ಬಿಕ್ಕಟ್ಟಿನ ಪರಿಹಾರದ ಬಗ್ಗೆ ಮಾಧ್ಯಮಗಳಿಗೆ ತಿಳಿಸುತ್ತೇನೆ ಎಂದು ಹೇಳಿದರು.
ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ನಿವಾರಣೆ ಸಂಬಂಧ ಕಳೆದ ಮೂರು ದಿನಗಳಿಂದ ನಡೆದ ಮಾತುಕತೆಗಳು ವಿಫಲವಾಗಿದೆಯೇ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಅವರು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ ಎಂದಷ್ಟೇ ಹೇಳಿ ದೆಹಲಿಯ ಹಾದಿ ಹಿಡಿದರು.