ರಾಜ್ಯ ರಾಜಕಾರಣದ ಬಿಕ್ಕಟ್ಟು ಶಮನವಾಗದಿರುವ ಹಿನ್ನೆಲೆಯಲ್ಲಿ ಇದೀಗ ಚೆಂಡು ದೆಹಲಿಗೆ ಸ್ಥಳಾಂತರಗೊಳ್ಳುವಂತಾಗಿದೆ. ದೆಹಲಿ ನಾಯಕರ ಸಮ್ಮುಖದಲ್ಲಿ ಬಿಕ್ಕಟ್ಟು ಪರಿಹರಿಸಲು ಪ್ರಮುಖರಿಗೆ ದೆಹಲಿಗೆ ಬರುವಂತೆ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದೆ.
ಆ ನಿಟ್ಟಿನಲ್ಲಿ ಸಚಿವ ಕರುಣಾಕರ ರೆಡ್ಡಿ, ಸ್ಪೀಕರ್ ಜಗದೀಶ್ ಶೆಟ್ಟರ್ ಸೇರಿದಂತೆ ಕೆಲವು ಪ್ರಮುಖ ನಾಯಕರಿಗೆ ದೆಹಲಿಗೆ ಆಗಮಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ.
ಶುಕ್ರವಾರ ಅರುಣ್ ಜೇಟ್ಲಿ ಅವರು ಮುಂಬೈಗೆ ಪ್ರಯಾಣ ಬೆಳೆಸಿದ ನಂತರವೂ ಯಡಿಯೂರಪ್ಪ, ಅನಂತ್ ಕುಮಾರ್, ಸದಾನಂದ ಗೌಡ ಅವರು ಒಂದೆಡೆ ಕುಳಿತು ಬಿಕ್ಕಟ್ಟು ನಿವಾರಣೆಗೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಿದರು.
ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ನಿವಾಸದಲ್ಲಿ ಯಡಿಯೂರಪ್ಪ ಅವರ ಬೆಂಬಲಿಗ ಸಚಿವರು, ಶಾಸಕರು ಗುಂಪು, ಗುಂಪಾಗಿ ಕುಳಿತು ಚರ್ಚೆ ನಡೆಸುತ್ತಿದ್ದುದು ಕಂಡು ಬಂತು.
ಶೆಟ್ಟರ್ ನಿವಾಸಕ್ಕೆ ಬಂದು ಹೋಗುವ ಶಾಸಕರ, ಸಂಸದರ ಸಂಖ್ಯೆ ಹೆಚ್ಚಾಗಿತ್ತು. ಕೆಲ ಶಾಸಕರು ಯಡಿಯೂರಪ್ಪ ನಾಯಕತ್ವ ಬೆಂಬಲಿಸುವಂತೆ ಒಪ್ಪಿಸುವ ಕಾರ್ಯದಲ್ಲಿ ಮಗ್ನರಾದರೆ, ಮತ್ತೆ ಕೆಲವರು ಪರ್ಯಾಯ ನಾಯಕತ್ವಕ್ಕೆ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದದ್ದು ಕಂಡು ಬಂತು.