ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ತಲೆದೋರಿರುವ ಬಿಕ್ಕಟ್ಟು ಶಮನ ಮಾಡಲು ಪಕ್ಷದ ವರಿಷ್ಠ ಅರುಣ್ ಜೇಟ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಇದೀಗ ವಿವಾದ ಹೈಕಮಾಂಡ್ ಅಂಗಳಕ್ಕೆ ಬಂದಿದೆ. ಮತ್ತೊಂದೆಡೆ ರೆಡ್ಡಿ ಸಹೋದರರು 67 ಶಾಸಕರನ್ನು ಒಗ್ಗೂಡಿಸಲು ತಂತ್ರಗಾರಿಕೆ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
40ಮಂದಿ ಶಾಸಕರು ಈಗಾಗಲೇ ಹೈದರಾಬಾದ್‌ನ ನವೋಟಲ್ ಹೋಟೆಲ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಶುಕ್ರವಾರ ಸಂಜೆ ವೇಳೆಗೆ ಸಚಿವ ಬಾಲಚಂದ್ರ ಜಾರಕಿ ಹೊಳಿ ನೇತೃತ್ವದಲ್ಲಿ 3ಮಂದಿ ಸಚಿವರು, 4ಮಂದಿ ಶಾಸಕರು ಸೇರಿದಂತೆ 7ಮಂದಿಯ ತಂಡವೊಂದು ಹೈದರಾಬಾದ್‌ನತ್ತ ಪ್ರಯಾಣ ಬೆಳೆಸಿದೆ.
ಹೈದರಬಾದ್‌ಗೆ ತೆರಳುತ್ತಿರುವ ಸಂದರ್ಭದಲ್ಲಿ ಖಾಸಗಿ ಸುದ್ದಿವಾಹಿನಿ ಟಿವಿ9ಜತೆ ಮಾತನಾಡಿದ ಜಾರಕಿಹೊಳಿ, ನಾವು ಪಕ್ಷಕ್ಕೆ ಎಂದೂ ದ್ರೋಹಬಗೆಯಲ್ಲ. ನಮಗೆ ಪಕ್ಷ ಮುಖ್ಯ ಎಂದಿರುವ ಅವರು, ನಮ್ಮೊಂದಿಗೆ ಈಗ 47ಶಾಸಕರು ಇದ್ದಾರೆ. ನಾಳೆಯೊಳಗೆ 67ಶಾಸಕರನ್ನು ಒಗ್ಗೂಡಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಕ್ಷದ ಹೈಕಮಾಂಡ್ ಎದುರು ಪರೇಡ್ ನಡೆಸುವುದಾಗಿಯೂ ಹೇಳಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕು ಎಂದು ರೆಡ್ಡಿ ಸಹೋದರರು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿಗಳು ಬಂಡಾಯ ಶಾಸಕರ ಅಸಮಾಧಾನಕ್ಕೆ ಸೊಪ್ಪು ಹಾಕದಿರುವ ಪರಿಣಾಮ ಬಿಕ್ಕಟ್ಟು ಶಮನವಾಗದೆ ಉಲ್ಭಣಗೊಳ್ಳುವಂತಾಗಿದೆ. ಇದರಿಂದಾಗಿ ರಾಜ್ಯರಾಜಕಾರಣದಲ್ಲಿ ಉದ್ಭವಿಸಿರುವ ಭಿನ್ನಮತದ ಕಿಚ್ಚು ಪಕ್ಷದ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.
ಪತ್ರಕರ್ತರ ಮೇಲೆ ರೆಡ್ಡಿ ಬೆಂಬಲಿಗರಿಂದ ಹಲ್ಲೆ:ಗುರುವಾರ ರಾತ್ರಿ ನವೋಟಲ್ ಹೋಟೆಲ್ ಸಮೀಪ ನಿಂತಿದ್ದ ರೆಡ್ಡಿ ಬೆಂಬಲಿಗರ ವಾಹನವೊಂದರ ಚಿತ್ರೀಕರಣ ನಡೆಸುತ್ತಿದ್ದ ಖಾಸಗಿ ತೆಲುಗು ವಾಹಿನಿಯೊಂದರ ಪತ್ರಕರ್ತನ ಮೇಲೆ ಹಲ್ಲೆ ನಡೆಸಿರುವುದನ್ನು ಪ್ರತಿಭಟಿಸಿ ಶುಕ್ರವಾರ ಪತ್ರಕರ್ತರು ಪ್ರತಿಭಟನೆ ನಡೆಸಿದರು. ಘಟನೆ ಕುರಿತಂತೆ ಶಹಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.