ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗ್ರಾಮೀಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಸುದ್ದಿ ಹರದಾಡತೊಡಗಿದೆ.
ಅಲ್ಲದೆ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಕೂಡ ಬದಲಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಪಕ್ಷದಲ್ಲಿನ ಬಿಕ್ಕಟ್ಟು ಶಮನ ಸಲುವಾಗಿ ಕರೆದಿದ್ದ ಸಭೆಯಲ್ಲಿ ರೆಡ್ಡಿ ಸಹೋದರರು ಸೇರಿದಂತೆ ಹಲವು ಶಾಸಕರು ಶೋಭಾ ಕರಂದ್ಲಾಜೆ ಮತ್ತು ಬಳಿಗಾರ್ ವಿರುದ್ಧವೇ ಅರುಣ್ ಜೇಟ್ಲಿ ಬಳಿ ದೂರು ನೀಡಿದ್ದಾರೆ. ಅಲ್ಲದೇ ಅವರನ್ನು ಸಂಪುಟದಿಂದ ಕೈ ಬಿಡದಿದ್ದರೆ ಯಾವುದೇ ರಾಜಿಗೂ ಸಿದ್ದವಿಲ್ಲ ಎಂದು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಸಿಎಂ ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ಪಕ್ಷದಲ್ಲಿನ ಬಿಕ್ಕಟ್ಟು ಪರಿಹಾರಕ್ಕಾಗಿ ಕೆಲವು ಮುಖಂಡರಿಗೆ ಹೈಕಮಾಂಡ್ ಬುಲಾವ್ ಬಂದಿದೆ. ಪಕ್ಷದ ವರಿಷ್ಠರ ಮುಂದೆ ದೆಹಲಿಯಲ್ಲಿ ನಡೆಯುವ ಸಂಧಾನ ಸಭೆ ನಂತರವೇ ಈ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.