ರೆಡ್ಡಿ ಸಹೋದರರೊಂದಿಗೆ ನಾನು ಗುರುತಿಸಿಕೊಂಡಿದ್ದೇನೆ. ನಾನು ನೈತಿಕವಾಗಿಯೇ ಅವರೊಂದಿಗಿದ್ದೇನೆ. ಕ್ಷೇತ್ರದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುವ, ಒಳಿತನ್ನೇ ಮಾಡುವಂಥವರೊಂದಿಗೆ ನಾನಿದ್ದೇನೆ. ಇದನ್ನು ಹೇಳಿಕೊಳ್ಳಲು ನನಗೆ ಯಾವುದೇ ಮುಜುಗರವಿಲ್ಲ. ರೆಡ್ಡಿ ಸಹೋದರರಿಗಾಗಿ ಪ್ರಾಣ ಕೊಡಲು ಕೂಡ ಸಿದ್ದ ಎಂದು ರಾಜ್ಯ ಸಣ್ಣ ಉಳಿತಾಯ ಖಾತೆ ಸಚಿವ ಕೆ.ಶಿವನಗೌಡ ನಾಯಕ ತಮ್ಮ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂಬ ಒಂದೇ ಒಂದು ಕಾರಣಕ್ಕೆ ಆನಂದ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ ಹಾಗೂ ನಾನು ರಾಜೀನಾಮೆ ಕೊಟ್ಟೆವು. ರೆಡ್ಡಿ ಸಹೋದರರು ನಮ್ಮ ಮನವೊಲಿಸಿದ್ದರೇ ಹೊರತು ಯಡಿಯೂರಪ್ಪ ಅವರಲ್ಲ. ಐದು ವರ್ಷ ಸುಭದ್ರ ಸರ್ಕಾರ ಇರಲಿ ಎಂಬ ಒಂದೇ ಕಾರಣಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ ಎಂದು ವಿವರಿಸಿದರು.
ಶುಕ್ರವಾರ ದೇವದುರ್ಗ ತಾಲೂಕಿನ ಮ್ಯಾದರಗೋಳ ಗ್ರಾಮದಲ್ಲಿ ನೆರೆ ಹಾವಳಿ ಸಂತ್ರಸ್ತರಿಗಾಗಿ ನಿರ್ಮಿಸಲಾಗುತ್ತಿರುವ ಪುನರ್ವಸತಿ ಗ್ರಾಮಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವನಗೌಡ ತಮ್ಮ ಆಕ್ರೋಶ ಹೊರಹಾಕಿದರು.
ಯಡಿಯೂರಪ್ಪ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕಿದೆ. ಅವರು ಮುಖ್ಯಮಂತ್ರಿ ಆಗಲಿ ಎಂಬ ಒಂದೇ ಒಂದು ಉದ್ದೇಶದಿಂದ ನನ್ನ ತಾಯಿ ಕಣ್ಣೀರಿಟ್ಟರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಭಾರಿ ಗೆಲುವು ಸಾಧಿಸಿದೆ ಎಂದರು.