'ನನ್ನಿಂದಾಗಿ ಸರ್ಕಾರ ಉರುಳುವ ಪರಿಸ್ಥಿತಿ ಉದ್ಭವಿಸಿಲ್ಲ, ಆ ನಿಟ್ಟಿನಲ್ಲಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ' ಎಂದು ಸಚಿವೆ ಶೋಭಾ ಕರಂದ್ಲಾಜೆ ಕಳೆದ ನಾಲ್ಕೈದು ದಿನಗಳಿಂದ ರಾಜ್ಯರಾಜಕಾರಣದಲ್ಲಿ ಸ್ಫೋಟಗೊಂಡ ಭಿನ್ನಮತದ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಖಾಸಗಿ ಸುದ್ದಿವಾಹಿನಿ ಟಿವಿ9ಗೆ ತಮ್ಮ ನಿವಾಸದಲ್ಲಿ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದೇನೆ. ಸಂಘ-ಪರಿವಾರದ ಹಿನ್ನೆಲೆಯಲ್ಲಿ ಬಂದಿರುವ ನಾನು, ಪಕ್ಷ ಕೊಟ್ಟ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ.
ಆದರೆ ಕೆಲವೊಂದು ಪಟ್ಟಭದ್ರಾ ಹಿತಾಸಕ್ತಿಗಳು ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಸುತ್ತಿವೆ ಎಂದು ಕಿಡಿಕಾರಿದ ಶೋಭಾ, ನನ್ನ ರಾಜೀನಾಮೆಗೆ ಯಾರೂ ಈವರೆಗೂ ಬೇಡಿಕೆ ಇಟ್ಟಿಲ್ಲ. ಹಾಗಾಗಿ ನಾನು ರಾಜೀನಾಮೆ ನೀಡುವುದಾಗಲಿ ಅಥವಾ ವಿವಾದದ ಕುರಿತಂತೆ ಪ್ರತಿಕ್ರಿಯಿಸುವುದಾಗಲಿ ನಾನು ಮಾಡಲಾರೆ ಎಂದು ಹೇಳಿದರು.
ಆದರೂ ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ತಾನು ಬದ್ಧ ಎಂದು ಹೇಳಿದ ಕರಂದ್ಲಾಜೆ, ಮುಖ್ಯಮಂತ್ರಿಗಳು, ಪಕ್ಷದ ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎಂದರು. ಅಂದರೆ ಮುಖ್ಯಮಂತ್ರಿಗಳ ಸ್ಥಾನ ಉಳಿಯಲು ನೀವು ನಿಮ್ಮ ಸ್ಥಾನ ತ್ಯಾಗ ಮಾಡಲು ಸಿದ್ದರಿದ್ದೀರಾ ಎಂಬ ಪ್ರಶ್ನೆಗೆ, ಇಲ್ಲಿ ರಾಜೀನಾಮೆಯ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಹ ವಿಷಯ ಕೂಡ ಪಕ್ಷದಲ್ಲಾಗಲಿ, ಹೈಕಮಾಂಡ್‌ನಲ್ಲಾಗಲಿ ಚರ್ಚೆ ಆಗಿಲ್ಲ. ನೀವು ಮಾಧ್ಯಮದವರು ಅನಾವಶ್ಯಕವಾಗಿ ಯಾವುದನ್ನು ಕೂಲಂಕಷವಾಗಿ ಪರಿಶೀಲಿಸದೆ ಸುದ್ದಿಯನ್ನು ಹೈಲೈಟ್ ಮಾಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೆ, ಮತ್ತೆ ರಾಜೀನಾಮೆ ಕುರಿತ ಪ್ರಶ್ನೆಗೂ ಕೂಡ ಅವರು ಮಾಧ್ಯಮದವರನ್ನು ದೂರಿದರು.