ಬಿಜೆಪಿಯ ಒಳಜಗಳದಿಂದಾಗಿ ನೆರೆ ಸಂತ್ರಸ್ತರು ಪರಿಹಾರ ಸಿಗದೆ ಪಡುತ್ತಿರುವ ಕಷ್ಟವನ್ನು ನೆರೆಹಾವಳಿಯಿಂದಲೂ ಪಟ್ಟಿಲ್ಲ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಬಿಜೆಪಿಯಲ್ಲಿನ ರಾಜಕೀಯ ಗೊಂದಲಗಳಿಂದಾಗಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಅಭಿವೃದ್ಧಿ ಕುಂಠಿತವಾಗಿದೆ. ನೆರೆ ಸಂತ್ರಸ್ತರ ಮೇಲೆ ನೇರ ಪರಿಣಾಮ ಬೀರಿದೆ ಎಂದು ಆಪಾದಿಸಿದರು.
ನೆರೆ ಸಂತ್ರಸ್ತರ ಸಹಾಯಕ್ಕಾಗಿ ಸರ್ಕಾರ ಧಾವಿಸುತ್ತಿಲ್ಲ, ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಟೀಕಿಸಿದರು. ಪಕ್ಷದ ಕಚೇರಿಯಲ್ಲಿ ಇಂದಿರಾಗಾಂಧಿ ಅವರು 25ನೇ ಪುಣ್ಯತಿಥಿ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಒಳಜಗಳದಲ್ಲಿ ಕಾಂಗ್ರೆಸ್ ಮಧ್ಯ ಪ್ರವೇಶಿಸುವುದಿಲ್ಲ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.