'ನನಗೂ ಚಾಣಕ್ಯನ ತಂತ್ರ ಗೊತ್ತು, ಜೀವನವೇ ಒಂದು ಸವಾಲು' ಎಂದು ಬಂಡಾಯದ ಬಾವುಟ ಹಾರಿಸಿರುವ ಬಳ್ಳಾರಿ ಗಣಿಧಣಿಗಳ ವಿರುದ್ಧ ಬಹಿರಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ, ನನಗೆ ಹೈಕಮಾಂಡ್ ಶ್ರೀರಕ್ಷೆ ಇದೆ ಎಂದು ಶನಿವಾರ ಸಂಜೆ ವಿಧಾನಸೌಧದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ ಅವರು, ಮಾಧ್ಯಮದವರಲ್ಲಿ ಮುಚ್ಚಿಡಲು ಏನೂ ಇಲ್ಲ. ಎಲ್ಲಾ ಬೆಳವಣಿಗೆಗಳು ತಮಗೆ ತಿಳಿದಿದೆ ಎಂದು ಹೇಳಿದರು.
ಕೆಲವು ಕ್ಷೇತ್ರಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗಿದೆ. ಅದಕ್ಕೆಲ್ಲ ಹೈಕಮಾಂಡ್ ಸೂಕ್ತ ಉತ್ತರ ನೀಡಲಿದೆ ಎಂದರು. ಈ ಸ್ಥಳದಲ್ಲಿ ಹಲವು ಐತಿಹಾಸಿಕ ಘಟನೆಗಳು ನಡೆದು ಹೋಗಿದೆ ಎಂದು ತಮ್ಮ ಮೂರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಕಂಡುಕೊಂಡ ಅನುಭವದ ಹಿನ್ನೆಲೆಯಲ್ಲಿ ಪಕ್ಷದಲ್ಲಿ ತನಗೆ ಸೆಡ್ಡು ಹೊಡೆದಿರುವವರಿಗೆ ಪರೋಕ್ಷವಾಗಿ ಛಾಟಿಯೇಟು ಬೀಸಿದರು.
ಈಗಲೂ ನಮ್ಮಲ್ಲಿ ಭೇದಭಾವ ಏನೂ ಇಲ್ಲ, ಜನಹಿತ ದೃಷ್ಟಿಯಿಂದ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಲಿಸಿಕೊಂಡು ಉತ್ತಮ ಆಡಳಿತ ನೀಡುವಲ್ಲಿ ಮುಂದಾಗಬೇಕಾಗಿದೆ ಎಂದರು. ನಾನೇನು ತಪ್ಪು ಮಾಡಿದ್ದೇನೆ ಹೇಳಿ, ಅಭಿವೃದ್ಧಿ ಕಾಮಗಾರಿ ಕಡೆಗೆ ಗಮನ ಹರಿಸಿ, ಉತ್ತಮ ಕಾರ್ಯ ಮಾಡುವುದು ತಪ್ಪಾ ಎಂದು ಗಂಭೀರವಾಗಿ ಪ್ರಶ್ನಿಸಿದರು.