ಕಷ್ಟಪಟ್ಟು ಕೆಲಸ ಮಾಡುವವರ ಮೇಲೆ ಆರೋಪಗಳು ಸಹಜ. ಉತ್ತಮ ಕೆಲಸ ಮಾಡುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವೆ ಶೋಭಾ ಕರಂದ್ಲಾಜೆ ಆರೋಪಗಳಿಗೆ ಹೆದರಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಧೈರ್ಯ ತುಂಬಿದ್ದಾರೆ.
ಬಿಜೆಪಿಯೊಳಗಿನ ಭಿನ್ನಮತ ಉಲ್ಬಣಗೊಂಡ ನಂತರ ರೆಡ್ಡಿ ಗುಂಪಿನಿಂದ ದಿನಕ್ಕೊಬ್ಬರಂತೆ ಕರಂದ್ಲಾಜೆ ರಾಜಿನಾಮೆಗೆ ಒತ್ತಾಯಿಸುತ್ತಿದ್ದರು. ಸಚಿವೆ ಇತರ ಇಲಾಖೆಗಳ ಕೆಲಸ ಕಾರ್ಯಗಳಲ್ಲೂ ಮೂಗು ತೂರಿಸುತ್ತಿದ್ದಾರೆ. ಅವರು ಸಂಪುಟದಲ್ಲಿ ಮುಂದುವರಿಯಬಾರದು ಎಂಬುದು ಅವರ ಒತ್ತಾಯವಾಗಿತ್ತು.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಯವರು ಕರಂದ್ಲಾಜೆಗೆ ಕ್ಲೀನ್ ಚಿಟ್ ನೀಡಿದ್ದಾರೆ. ಕರಂದ್ಲಾಜೆ ಸೇರಿದಂತೆ ರಾಜ್ಯ ಸಚಿವ ಸಂಪುಟದ ಪ್ರತಿಯೊಬ್ಬರೂ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಭಿನ್ನಮತೀಯರ ಆರೋಪಗಳಿಗೆ ಸೊಪ್ಪು ಹಾಕಬೇಕಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಬಳ್ಳಾರಿ ಸಂಸದೆ ಜೆ. ಶಾಂತಾ ಕೂಡ ಕರಂದ್ಲಾಜೆ ಮೇಲೆ ಹರಿಹಾಯ್ದು, ರಾಜಿನಾಮೆಗೆ ಒತ್ತಾಯಿಸಿದ್ದರು. ಈ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಉನ್ನತ ಸ್ಥಾನದಲ್ಲಿರುವವರ ಜವಾಬ್ದಾರಿ ರಹಿತ ಹೇಳಿಕೆಗಳಿಗೆ ಮುಂದಿನ ದಿನಗಳಲ್ಲಿ ಅವರೇ ಬೆಲೆ ತೆರಲಿದ್ದಾರೆ. ನಾವೇನೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ತನ್ನ ನಿವಾಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ವೇಳೆ ಯಡಿಯೂರಪ್ಪ ಹೇಳಿದರು.